ಸಿದ್ದರಾಮಯ್ಯ ಯಾವ ಕ್ಷಣದಲ್ಲೂ ರಾಜೀನಾಮೆ ಕೊಡ್ತಾರೆ: ವಿಜಯೇಂದ್ರ ಬಾಂಬ್

Krishnaveni K

ಶುಕ್ರವಾರ, 17 ಜನವರಿ 2025 (11:03 IST)
ಬೆಂಗಳೂರು: ಸಿದ್ದರಾಮಯ್ಯನವರು ಯಾವ ಕ್ಷಣದಲ್ಲಿ ಬೇಕಾದರೂ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಾಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಿನ್ನೆ ಸಿದ್ದರಾಮಯ್ಯನವರು ಕೆಪಿಸಿಸಿ ಹುದ್ದೆ ಅಂಗಡಿಯಲ್ಲಿ ಮಾರಾಟವಾಗಲ್ಲ ಎಂದಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರೆಲ್ಲಾ ಸ್ವ ಇಚ್ಛೆಯಿಂದ ಹೇಳಿಕೆ ನೀಡುತ್ತಿಲ್ಲ. ರಾಜಕೀಯ ಚಾಣಕ್ಷ್ಯ ಸಿದ್ದರಾಮಯ್ಯನವರು ತಮ್ಮ ಸಿಎಂ ಕುರ್ಚಿಗೆ ಧಕ್ಕೆ ಬಂದಿದೆ ಎಂದು ಅರಿವಾದ ತಕ್ಷಣ ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ತಮ್ಮ ಆಪ್ತರಿಂದ ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

‘ಹೀಗಾಗಿ ಸಿದ್ದರಾಮಯ್ಯನವರು ಯಾವಾಗ ರಾಜೀನಾಮೆ ಕೊಡ್ತಾರೆ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದರೂ ರಾಜೀನಾಮೆ ಕೊಡಬಹುದು. ಇನ್ನೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಸಿಂಹಪಾಲಿದೆ ಎಂದು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಇವರಿಬ್ಬರ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.

ಈ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗುತ್ತಿದೆ. ಬಿಜೆಪಿ ಮೇಲೆ 40% ಕಮಿಷನ್ ಆರೋಪ ಮಾಡಿದ್ದರು. ಆದರೆ ಈ ಸರ್ಕಾರ 60% ಕಮಿಷನ್ ಸರ್ಕಾರ ಎಂದು ರಾಜ್ಯದ ಜನರೇ ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ