ಬೆಂಗಳೂರು : ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ವಿವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತರಲು ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ. ಕಾಯ್ದೆ ತಿದ್ದುಪಡಿಯಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ.ಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ.
ಹೊಸ ವಿವಿಗಳ ಪೈಕಿ ಕ್ರಮವಾಗಿ ಚಾಮರಾಜನಗರ ವಿವಿಯಲ್ಲಿ 18, ಹಾಸನ ವಿವಿಯಲ್ಲಿ 36, ಹಾವೇರಿ 40, ಬೀದರ್ 140, ಕೊಡಗು 24, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ಇವುಗಳ ಜತೆಗೆ ಮಂಡ್ಯ ವಿವಿ ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.
ನೂತನ ವಿವಿಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ. ಇವು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಸಚಿವರು ತಿಳಿಸಿದ್ದಾರೆ.