ಬೆಂಗಳೂರು: ಮುಡಾ ಹಗರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ. ನನ್ನ ಪಾತ್ರ ಈ ಪ್ರಕರಣದಲ್ಲಿ ಏನೂ ಇಲ್ಲವಾಗಿದ್ದು, ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಮುಡಾ ಸೈಟ್ ವಾಪಾಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ತೀರ್ಮಾನವನ್ನು ನನ್ನ ಪತ್ನಿ ಸ್ವತಂತ್ರವಾಗಿ ಕೈಗೊಂಡಿದ್ದಾರೆ. ಸೈಟ್ ವಾಪಾಸ್ ಕೊಡುವ ತೀರ್ಮಾನದ ಬಗ್ಗೆ ನನ್ನ ಜತೆ ಚರ್ಚೆ ನಡೆಸಿಲ್ಲ. ಅವರ ಸಹೋದರ ನೀಡಿದ ಜಮೀನು ಅದು. ಮುಡಾದವರು ಅವರನ್ನು ಸ್ವಾಧೀನಕ್ಕೆ ಪಡೆದುಕೊಂಡು ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ವಿಜಯ ನಗರದಲ್ಲಿ ನೀಡಿದ್ದರು. ಮುಡಾಗೆ ನಾವೇನು ಅಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಅವರೇ ವಿಜಯನಗರದಲ್ಲಿ ಕೊಟ್ಟಿದ್ದರು. ಇದರಿಂದ ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುತ್ತಿದೆ ಎಂದು ಸೈಟ್ ವಾಪಾಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಸೈಟ್ ವಾಪಸ್ ನೀಡಿ ತಪ್ಪು ಒಪ್ಪಿಕೊಂಡ ಹಾಗಲ್ವ ಎಂಬ ಬಿಜೆಪಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೇಗೆ ತಪ್ಪು ಒಪ್ಪಿದಂತಾಗುತ್ತದೆ. ಈ ನಿರ್ಧಾರವನ್ನು ನನ್ನ ಪತ್ನಿ ಮನನೊಂದು ತೆಗೆದುಕೊಂಡಿರುವ ನಿರ್ಧಾರ. ಬಿಜೆಪಿಗರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ತಪ್ಪೇ ಮಾಡಿಲ್ಲವಲ್ಲ ಎಂದು ಹರಿಹಾಯ್ದರು.