ತಮಿಳುನಾಡಿಗೆ ನೀರು ನಿಲ್ಲಿಸದಿದ್ದರೆ ಕಾವೇರಿ ರಕ್ಷಣಾ ಯಾತ್ರೆ : ಬೊಮ್ಮಾಯಿ

ಶನಿವಾರ, 9 ಸೆಪ್ಟಂಬರ್ 2023 (12:02 IST)
ಮಂಡ್ಯ : ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸದಿದ್ದರೆ ಸೆ.12ರ ನಂತರ ಕಾವೇರಿ ಕೊಳ್ಳದ ಜಿಲ್ಲೆಗಳ ಜನರೊಂದಿಗೆ ಕಾವೇರಿ ರಕ್ಷಣಾ ಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
 
ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟ ಹಾಗೂ ವಾಸ್ತವ ಸ್ಥಿತಿ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೇ ಹಾಗೂ ಜೂನ್ ತಿಂಗಳ ಪ್ರಾರಂಭದಲ್ಲಿಯೇ ಈ ವರ್ಷ ಮಳೆ ಕೊರತೆಯಾಗಿರುವುದು ಗೊತ್ತಾಗಿದೆ. ಆದರೂ ಸರ್ಕಾರ ಸಂಪೂರ್ಣವಾಗಿ ಕಾವೇರಿ ವ್ಯಾಪ್ತಿಯ ನಾಲ್ಕು ಡ್ಯಾಮ್ಗಳ ನಿರ್ವಹಣೆಯಲ್ಲಿ ವಿಫಲವಾಗಿದೆ.

ಕುಡಿಯುವ ನೀರಿಗೆ ಅನುಕೂಲವಾಗಲು ಕೆರೆಗಳಿಗೆ ರೈತರ ಹೊಲಗಳಿಗೆ ಜೂನ್ ತಿಂಗಳಲ್ಲಿ ನೀರು ಬಿಡಬೇಕಿತ್ತು. ಐಸಿಸಿ ಮೀಟಿಂಗ್ ಜೂನ್ನಲ್ಲಿ ಕರೆಯುವ ಬದಲು ಆಗಸ್ಟ್ನಲ್ಲಿ ಕರೆದಿದ್ದಾರೆ ಎಂದು ಕಿಡಿಕಾರಿದ್ದಾರೆ. 

ತಮಿಳುನಾಡಿನವರು 15,000 ಕ್ಯೂಸೆಕ್ ನೀರು ಕೇಳಿದ ಮೇಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಕಾಲಹರಣ ಮಾಡಿದೆ. ಅವರು ಕುರುವೈ ಬೆಳೆಗೆ ಈಗಾಗಲೇ 32 ಟಿಎಂಸಿ ಬದಲು 60 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ. ಆದರೂ ಅವರ ಬೇಡಿಕೆಯಂತೆ ಪ್ರತಿದಿನ ನೀರು ಹರಿಸುತ್ತಿದ್ದಾರೆ.

ಈ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಕೇಳಿದಾಗ ಇನ್ನು ಮುಂದೆ ನೀರು ಬಿಡುವುದಿಲ್ಲ ಎಂದಿದ್ದರು. ಆದರೂ ನಿರಂತರ ನೀರು ಹರಿಸುತ್ತಿದ್ದಾರೆ. ಸಿಡಬ್ಲುಎಂಎ ಎದುರು ಸರಿಯಾಗಿ ವಾದ ಮಾಡಿದ್ದರೆ ಸುಮಾರು 15 ಟಿಎಂಸಿ ನೀರು ಉಳಿಯುತ್ತಿತ್ತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ