ಪ್ರಿಯಾಂಕ್ ಖರ್ಗೆ ಹಗರಣವೂ ಹೊರಗೆ ಬಂದಿದೆ, ಅವರೂ ರಾಜೀನಾಮೆ ನೀಡಬೇಕು: ಛಲವಾದಿ ನಾರಾಯಣಸ್ವಾಮಿ

Krishnaveni K

ಸೋಮವಾರ, 26 ಆಗಸ್ಟ್ 2024 (15:57 IST)
ಬೆಂಗಳೂರು: ಪ್ರಿಯಾಂಕ್ ಖರ್ಗೆಯವರ ಹಗರಣವೂ ಹೊರಗೆ ಬಂದಿದ್ದು, ಅವರನ್ನು ಸಚಿವ ಸ್ಥಾನಕ್ಕೆ ವಜಾ ಮಾಡಬೇಕೆಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು. 

ಬಿಜೆಪಿ ಕೋಲಾರ ಜಿಲ್ಲಾ ಕಚೇರಿಯಲ್ಲಿ ಇಂದು ಸದಸ್ಯತ್ವ ಅಭಿಯಾನ-2024ರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದೇವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಮಾಡಲಾಗಿತ್ತು. ಆ ಟ್ರಸ್ಟ್ ಯಾವುದೇ ವ್ಯವಹಾರ ಮಾಡುವಂಥದ್ದಲ್ಲ. ಅಥವಾ ಕೈಗಾರಿಕೆ ಮಾಡುವಂಥದ್ದಲ್ಲ. ಅದೊಂದು ಧಾರ್ಮಿಕ ಸಂಸ್ಥೆ ಎಂದು ವಿವರಿಸಿದರು.

ಈ ಟ್ರಸ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಖರ್ಗೆ, ರಾಧಾಕೃಷ್ಣ, ಪ್ರಿಯಾಂಕ್ ಖರ್ಗೆ ಅವರೂ ಸೇರಿ ಅವರ ಮನೆಯವರೇ 7 ಜನ ಟ್ರಸ್ಟಿಗಳಾಗಿದ್ದಾರೆ. ಈ ಟ್ರಸ್ಟಿಗೆ ಒಂದು ಎಕರೆಗೆ 5 ಕೋಟಿ ಬೆಲೆಬಾಳುವ ಕೆಐಎಡಿಬಿಯ ಇಂಡಸ್ಟ್ರಿಯಲ್ ಲೇ ಔಟ್‍ನಲ್ಲಿ 5 ಎಕರೆ ಜಾಗವನ್ನು ಪಡೆದುಕೊಂಡಿದ್ದಾರೆ. ಈ ಜಾಗಕ್ಕೆ ಹೊರಗಡೆ ಪ್ರತಿ ಎಕರೆಗೆ 10ರಿಂದ 15 ಕೋಟಿ ಬೆಲೆ ನಡೆಯುತ್ತಿದೆ ಎಂದರು.

ಪ್ರಿಯಾಂಕ್ ಖರ್ಗೆ ಅವರೊಬ್ಬ ಸಚಿವರು. ಸಚಿವರಾದವರು ಯಾವುದೇ ಕಾರಣಕ್ಕೆ ಅಧಿಕಾರ ದುರುಪಯೋಗ ಮಾಡುವಂತಿಲ್ಲ; ರಾಧಾಕೃಷ್ಣ ಅವರು ಸಂಸದರು. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರು. ಇದು ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗವೂ ಆಗುತ್ತದೆ. ಈ ಮಾಹಿತಿ ಎಲ್ಲ ಕಡೆ ಹರಿದಾಡುತ್ತಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ತಕ್ಷಣ ಅವರನ್ನು ಕ್ಯಾಬಿನೆಟ್‍ನಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
 
ಆ ಜಮೀನನ್ನು ಮತ್ತೆ ವಾಪಸ್ ಪಡೆಯಬೇಕು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂಬಂಧ ಮಾನ್ಯ ರಾಜ್ಯಪಾಲರಿಗೆ ನಾಳೆ ದೂರು ನೀಡಲಾಗುವುದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
ನಿಗಮ ಮಂಡಳಿಗಳಿಗೆ ಬಜೆಟ್‍ನಲ್ಲಿ ಮೀಸಲಿಟ್ಟ ಹಣ ಕೊಟ್ಟು ವಾಪಸ್ ಪಡೆದಿದ್ದಾರೆ. ಎಲ್ಲವನ್ನೂ ಗ್ಯಾರಂಟಿಗಳಿಗೆ ಕೊಟ್ಟದ್ದಾಗಿ ಹೇಳುತ್ತಾರೆ. ಬಜೆಟ್‍ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಕೊಟ್ಟಿದ್ದಾಗಿ ತಿಳಿಸಿದ್ದರು. ಅಷ್ಟು ಸಾಕಲ್ಲವೇ? ಮತ್ತೆ ಯಾಕೆ ವಾಪಸ್ ಪಡೆದಿದ್ದೀರಿ? 25 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಎಸ್‍ಇಪಿ, ಟಿಎಸ್‍ಪಿ ದುಡ್ಡನ್ನೂ ವಾಪಸ್ ಪಡೆದಿದ್ದೀರಿ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ನಿಗಮದಲ್ಲಿ ಆದಂತೆ ಖಾತೆಗೆ ಹಣ ಹಾಕಿ ಇವರು ಮಜಾ ಮಾಡುತ್ತಿರುವಂತಿದೆ ಎಂದು ಟೀಕಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ