ಬೆಂಗಳೂರು: ವಿಮೆ ಹಣಕ್ಕಾಗಿ ತನ್ನ ಹಾಗೇ ಹೋಲುವ ವ್ಯಕ್ತಿಯ ಜೀವ ತೆಗೆದು ಉದ್ಯಮಿಯೊಬ್ಬ ಸಿಕ್ಕಿಬಿದ್ದ ಕತೆಯೇ ರೋಚಕವಾಗಿದೆ. ಈ ಘಟನೆ ನಡೆದಿರುವುದು ಹೊಸಕೋಟೆಯಲ್ಲಿ.
ಮುನಿಸ್ವಾಮಿ ಗೌಡ ತನ್ನ ಪತ್ನಿ ಶಿಲ್ಪಾ ರಾಣಿ ಮತ್ತು ಚಾಲಕ ದೇವೇಂದ್ರ ನಾಯಕ್ ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ. ಮುನಿಸ್ವಾಮಿ ಗೌಡ ಉದ್ಯಮಿಯಾಗಿದ್ದ. ಆತನಿಗೆ ಸಾಕಷ್ಟು ಸಾಲವಾಗಿತ್ತು. ಆದರೆ ಇದನ್ನು ತೀರಿಸಲು ಆತ ಇದೇ ಮಾರ್ಗ ಕಂಡುಕೊಂಡಿದ್ದ. ಪತ್ನಿ ಶಿಲ್ಪಾ ರಾಣಿ ನಾಮಿನಿಯಾಗಿ ಸಾಕಷ್ಟು ವಿಮೆ ಪಾಲಿಸಿ ಮಾಡಿಸಿಕೊಂಡಿದ್ದ.
ಹೀಗಾಗಿ ಸಾಲ ತೀರಿಸಿಕೊಳ್ಳಲು ತನ್ನ ಸಾವಿನ ಕತೆ ಕಟ್ಟಲು ಯೋಜನೆ ರೂಪಿಸಿದ್ದ. ಇದಕ್ಕಾಗಿ ಒಬ್ಬ ಬಡ ಭಿಕ್ಷಕನನ್ನು ಬಳಸಿಕೊಂಡಿದ್ದ. ಕೆಲಸ ಮಾಡಿಸುವ ನೆಪದಲ್ಲಿ ಆತನನ್ನು ರಸ್ತೆ ಬದಿಯಲ್ಲಿ ಟಯರ್ ಬದಲಿಸಲು ಸಹಾಯ ಮಾಡಲು ಹೇಳಿದ್ದ. ಈ ವೇಳೆ ಬೇಕೆಂದೇ ಆತನನ್ನು ರಸ್ತೆ ದೂಡಿದ್ದ. ಅದೇ ಹೊತ್ತಿಗೆ ಚಾಲಕ ದೇವೇಂದ್ರ ನಾಯಕ ಆತನ ಮೇಲೆ ಲಾರಿ ಚಲಾಯಿಸಿ ಕೊಂದೇ ಬಿಟ್ಟಿದ್ದ. ಬಳಿಕ ಇದನ್ನು ತಾನೇ ಆಕ್ಸಿಡೆಂಟ್ ನಲ್ಲಿ ಸತ್ತಿದ್ದಾಗಿ ಬಿಂಬಿಸಿದ್ದ.
ಇದಕ್ಕಾಗಿ ಚಾಲಕ ದೇವೇಂದ್ರ ನಾಯಕ್ ಕೈ ಜೋಡಿಸಿದ್ದ. ಅಪರಿಚಿತ ಮೃತದೇಹವನ್ನು ತನ್ನ ಗಂಡನದ್ದು ಎಂದು ಶಿಲ್ಪಾ ರಾಣಿ ಖಚಿತಪಡಿಸಿ ಅಂತ್ಯಸಂಸ್ಕಾರವನ್ನೂ ಮಾಡಿದ್ದಳು. ಬಳಿಕ ಗಂಡ ಮಾಡಿಸಿಟ್ಟಿದ್ದ ವಿಮೆ ಹಣವನ್ನೂ ಪಡೆದುಕೊಳ್ಳುವ ಹಂತದಲ್ಲಿದ್ದಳು.
ಆದರೆ ಈ ನಡುವೆ ಆರೋಪಿ ಮುನಿಸ್ವಾಮಿ ಗೌಡ ತಾನು ಬದುಕಿರುವ ವಿಚಾರವನ್ನು ಅಕಸ್ಮಾತ್ತಾಗಿ ತನ್ನ ದೂರದ ಸಂಬಂಧಿಯೂ ಆಗಿರುವ ಚಿಕ್ಕಬಳ್ಳಾಪುರದ ಸಿದ್ಲಘಟ್ಟದ ಇನ್ಸ್ ಪೆಕ್ಟರ್ ಶ್ರೀನಿವಾಸ್ ಬಳಿ ಬಾಯ್ಬಿಟ್ಟಿದ್ದ. ಇದನ್ನು ತಿಳಿದ ತಕ್ಷಣ ಶ್ರೀನಿವಾಸ್ ಈ ವಿಚಾರವನ್ನು ಗಂಡಸಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿದ್ದು, ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದಾರೆ. ಇದರಿಂದಾಗಿ ಆರೋಪಿಗಳೆಲ್ಲರೂ ಬಂಧನಕ್ಕೊಳಗಾಗಿದ್ದಾರೆ.