ಭಾರತದ ಮೇಲೆ ಅಮೆರಿಕಾ ಸುಂಕ ಹಾಕುತ್ತಿರುವುದಕ್ಕೆ ಅಸಲಿ ಕಾರಣ ಇಲ್ಲಿದೆ

Krishnaveni K

ಗುರುವಾರ, 31 ಜುಲೈ 2025 (10:21 IST)
ನವದೆಹಲಿ: ಭಾರತದ ಮೇಲೆ ಅಮೆರಿಕಾ ಈಗ ಇನ್ನಿಲ್ಲದ ನೆಪ ಹೇಳಿ ದುಬಾರಿ ಸುಂಕದ ಬರೆ ಹಾಕುತ್ತಿದೆ. ಆದರೆ ಡೊನಾಲ್ಡ್ ಟ್ರಂಪ್ ನನ್ನ ಸ್ನೇಹಿತ ರಾಷ್ಟ್ರ ಎಂದು ಹೇಳಿಕೊಂಡೇ  ದುಬಾರಿ ಸುಂಕ ಹಾಕುತ್ತಿರುವುದರ ಹಿಂದೆ ಬೇರೆಯೇ ಕಾರಣವಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದಿಂದ ಭಾರತ ಕಡಿಮೆ ಬೆಲೆ ತೈಲ ಖರೀದಿ ಮಾಡುತ್ತಿದೆ. ಯುದ್ಧ ಪರಿಕರಗಳನ್ನು ಖರೀದಿಸುತ್ತಿದೆ. ಇದನ್ನು ನಿಲ್ಲಿಸದೇ ಇದ್ದರೆ ಸುಂಕ ಹೆಚ್ಚು ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಆದರೆ ಭಾರತಕ್ಕೆ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

ಅದರಂತೆ ಅಮೆರಿಕಾ ಈಗ 25% ಸುಂಕ ವಿಧಿಸಿ ಭಾರತಕ್ಕೆ ಹೊಡೆತ ನೀಡಿದೆ. ಇದರಿಂದ ಭಾರತದ ಸಾಗರೋತ್ಪನ್ನಗಳು ಸೇರಿದಂತೆ ಅನೇಕ ಉದ್ಯಮ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ವ್ಯಾಪಾರ ಚಟುವಟಿಕೆಗಳು ಕುಂಠಿತವಾಗಲಿದೆ. ಪರಿಣಾಮ ಭಾರತದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ.

ಆದರೆ ಭಾರತದ ಮೇಲೆ ಟ್ರಂಪ್ ಸುಂಕ ಪ್ರಹಾರ ನಡೆಸುವುದಕ್ಕೆ ನಿಜ ಕಾರಣ ಬೇರೆಯೇ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕಾದ ಮಾಂಸಾಹಾರಿ ಹಾಲನ್ನು ನಮ್ಮ ಮಾರುಕಟ್ಟೆಗೆ ಬಿಡಲು ಭಾರತ ನಿರಾಕರಿಸಿತ್ತು. ಇದನ್ನು ಭಾರತದ ಮಾರುಕಟ್ಟೆ ಪ್ರವೇಶಿಸಲು ಬಿಟ್ಟರೆ ಭಾರತದ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ. ಈ ಕಾರಣಕ್ಕೆ ಭಾರತ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ. ಹೀಗಾಗಿಯೇ ಇದಕ್ಕೆ ಸಹಿ ಹಾಕಿಸಲೇ ಅಮೆರಿಕಾ ಸುಂಕದ ಹೊಡೆತ ನೀಡಿ ಪರೋಕ್ಷವಾಗಿ ಭಾರತದ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಏನಿದು ಮಾಂಸಾಹಾರ ಹಾಲು?
ಅಮೆರಿಕಾದ ಪಶುಗಳಿಗೆ ಮಾಂಸಾಹಾರವನ್ನೂ ನೀಡಲಾಗುತ್ತದೆ. ಹೀಗಾಗಿ ಅಲ್ಲಿನ ಹಾಲು ಮಾಂಸಾಹಾರ ಹಾಲು ಎಂದೇ ಕರೆಯಲ್ಪಡುತ್ತದೆ. ಭಾರತದಲ್ಲಿ ಗೋವುಗಳಿಗೆ ದೇವರ ಸ್ಥಾನಮಾನವಿದೆ. ಇಲ್ಲಿ ಪಶುಗಳಿಗೆ ಮಾಂಸಾಹಾರವನ್ನು ನೀಡುವುದಿಲ್ಲ. ಒಂದು ವೇಳೆ ಅಮೆರಿಕಾದ ಹಾಲು ಭಾರತದ ಮಾರುಕಟ್ಟೆ ಪ್ರವೇಶಿಸಿದರೆ ಇಲ್ಲಿನ ಹಾಲಿನ ಉದ್ಯಮ ನೆಲಕಚ್ಚಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ