ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಸಂತ್ರಸ್ತ ಮಾಲಿಕರ ಮನೆಯಲ್ಲಿ ಇಂದು ಬಿಜೆಪಿ ನಾಯಕರು ಹಸುಗಳಿಗೆ ಗೋಪೂಜೆ ಮಾಡಿ ಸಂಕ್ರಾಂತಿ ಆಚರಿಸಿದರು.
ಇಂದು ಬೆಳಿಗ್ಗೆಯೇ ಬಿಜೆಪಿ ನಾಯಕರಾದ ಬಿವೈ ವಿಜಯೇಂದ್ರ, ಆರ್ ಅಶೋಕ್, ಭಾಸ್ಕರ್ ರಾವ್ ಸೇರಿದಂತೆ ಹಲವರು ಹಸು ಮಾಲಿಕರ ಮನೆಗೆ ಬಂದು ಅವರಿಗೆ ಸಾಂತ್ವನ ಹೇಳಿದರು. ಬಳಿಕ ಹಸುಗಳಿಗೆ ಹೂ, ಹಣ್ಣು ನೀಡಿ ಪೂಜೆ ಸಲ್ಲಿಸಿದರು.
ಇದೇವೇಳೆ ತಂಡವು ಹಸುಗಳ ಮಾಲೀಕರಿಗೆ ಧೈರ್ಯ ತುಂಬಿತು. ಸರಕಾರದ ನಿಷ್ಕ್ರಿಯತೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಕುರಿತು ತಂಡವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಗೋಪೂಜೆಯನ್ನೂ ನೆರವೇರಿಸಲಾಯಿತು.
ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಚಾಮರಾಜಪೇಟೆಯಲ್ಲಿ ನಡೆದ ಈ ಘಟನೆ ಇಡೀ ದೇಶವೇ ಗಮನಿಸಿದೆ. ಎಲ್ಲಾ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹದ್ದೊಂದು ಘಟನೆ ಇದುವರೆಗೆ ನಡೆದಿರಲಿಲ್ಲ. ಇದು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಪಾಲನೆ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಭಾರತೀಯ ಜನತಾ ಪಾರ್ಟಿಯ ಪರವಾಗಿ ನಾವು ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದು ಆಗ್ರಹಿಸಿದ್ದಾರೆ.