ಮಳೆಗಾಲದ ಸಿದ್ದತೆ ಕುರಿತು ಮುಖ್ಯ ಆಯುಕ್ತರು ರವರಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ
ಬುಧವಾರ, 14 ಜೂನ್ 2023 (19:16 IST)
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆಳ ಸೇತುವೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕೂಡಲೆ ಸಿಸಿ ಟಿವಿ, ವಿದ್ಯುತ್ ದೀಪ ಹಾಗೂ ಮಳೆ ನೀರಿನ ಪ್ರಮಾಣ ತಿಳಿಯಲು ಮೀಟರ್ ಗೇಜ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಮಳೆಗಾಲದ ಸಿದ್ದತೆ ಕುರಿತು ಹಿರಿಯ ಅಧಿಕಾರಿಗಳ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 53 ಕೆಳಸೇತುವೆಗಳು ಬರಲಿದ್ದು, ಈ ಪೈಕಿ 41 ಕೆಳಸೇತುವೆಗಳಲ್ಲಿ ಈಗಾಗಲೇ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಾಕಿ 12 ಕೆಳಸೇತುವೆಗಳಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಬೇಕಿದ್ದು, ಕೂಡಲೆ ಅಗತ್ಯ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಗರದಲ್ಲಿ 198 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿದ್ದು, ಅದರಲ್ಲಿ 118 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ನೀಡಲಾಗಿದೆ. ಇನ್ನುಳಿದ 80 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದ್ದು, ಈ ಪೈಕಿ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತೊಮ್ಮೆ ಪರಿಶೀಲಿಸಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಹೆಚ್ಚು ನಿಗಾವಹಿಸಬೇಕಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ನೀರು ನಿಲ್ಲುವಂತಹ ಪ್ರದೇಶದಲ್ಲಿ ಪಂಪ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ಅರಣ್ಯ ವಿಭಾಗದಿಂದ ಮರಗಳು ಬಿದ್ದಿರುವ ಸ್ಥಳಕ್ಕೆ ತ್ವರಿತವಾಗಿ ಹೋಗಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ಎಲ್ಲಿಯೂ ಯಾವುದೇ ರೀತಿಯ ತೊಂದರೆಗಳಾಗದಂತೆ ನಾಗರಿಕರಿಂದ ಬಂದಂತಹ ದೂರುಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಮೆಟ್ರೋ, ಜಲಮಂಡಳಿ, ಬೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ಗೇಲ್ ಸೇರಿದಂತೆ ಇನ್ನಿತರೆ ಇಲಾಖೆಗಳು ಕೈಗೆತ್ತಿಕೊಳ್ಳುವ ಕಾಮಗಾರಿಗಳಿಂದ ರಸ್ತೆ ಬದಿಯ ಚರಂಡಿಗಳು, ರಸ್ತೆ ಮೇಲ್ಮೈ ಹಾಳಾಗಿ ಮಳೆಗಾಲದಲ್ಲಿ ರಸ್ತೆಗಳ ಮೂಲಕ ನೀರು ನುಗ್ಗುವುದು, ನೀರು ನಿಲ್ಲುವ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಆಯಾ ವಲಯ ಹಿರಿಯ ಅಧಿಕಾರಿಗಳು ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೋಳ್ಳಬೇಕು. ಈ ಸಂಬಂಧ ರಾಜಕಾಲುವೆ ಕಾಮಗಾರಿ, ಪ್ರವಾಹ ಪೀಡಿತ ಪ್ರದೇಶಗಳು, ಕೆಳಸೇತುವೆ ಹಾಗೂ ಮೇಲುಸೇತುವೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇರುವ ಸ್ಥಳದಲ್ಲಿ ಏನಾದರು ಸಮಸ್ಯೆ ಇದ್ದರೆ ಕೂಡಲೆ ಅದನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರು, ಕೆರೆಗಳ ವಿಭಾಗದ ಮುಖ್ಯ ಅಭಿಯಂತರರು, ಘನತ್ಯಾಜ್ಯ ವಿಭಾಗದ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.