ಸಾಫ್ಟ್ವೇರ್ ಕಂಪನಿಗಳು ರಾಜ್ಯ ತೊರೆದರೆ ಯುವಜನರ ಪರಿಸ್ಥಿತಿ ಏನಾಗಬೇಕು: ಸಿ.ಕೆ.ರಾಮಮೂರ್ತಿ

Krishnaveni K

ಶುಕ್ರವಾರ, 19 ಸೆಪ್ಟಂಬರ್ 2025 (16:36 IST)
ಬೆಂಗಳೂರು: ರಾಜ್ಯದಲ್ಲಿರುವ ಸಾಫ್ಟ್‍ವೇರ್ ಕಂಪನಿಗಳು ಬೇರೆ ರಾಜ್ಯಗಳಿಗೆ ಹೋದರೆ ಇಲ್ಲಿರುವ ಯುವಜನರ ಪರಿಸ್ಥಿತಿ ಏನಾಗಬೇಕು? ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ಪ್ರಶ್ನಿಸಿದ್ದಾರೆ.
 
ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬೆಂಗಳೂರಿನ ಅನೇಕ ಸಾಫ್ಟ್‍ವೇರ್ ದಿಗ್ಗಜರು, ಮೋಹನ್ ದಾಸ್ ಪೈ ಅವರು ಮತ್ತು ಅನೇಕ ಕಂಪನಿಗಳು ಬೆಂಗಳೂರಿನ ರಸ್ತೆಯ ಗುಂಡಿಗಳ ತೊಂದರೆಯ ಬಗ್ಗೆ ಮಾತನಾಡಿದಾಗ ಅವರನ್ನು ಕರೆಸಿ ಸಮಸ್ಯೆಗಳಿಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಬೇಕಿತ್ತು. ಆದರೆ ಅವರ ಜೊತೆ ಮಾತನಾಡದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇಡೀ ಸಾಫ್ಟ್‍ವೇರ್ ಕಂಪನಿಗಳಿಗೆ ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
 
ಈಗಾಗಲೇ ಸಾಫ್ಟ್‍ವೇರ್ ಕಂಪನಿಗಳು ರಾಜ್ಯದಿಂದ ಒಂದುಕಾಲನ್ನು ಆಚೆ ಇಡುವ ಕೆಲಸವಾಗುತ್ತಿದೆ. ಬೇರೆ ಬೇರೆ ರಾಜ್ಯದವರು ವ್ಯಾಪಕವಾಗಿ ಸಾಫ್ಟ್‍ವೇರ್ ಕಂಪನಿಗಳನ್ನು ಆಹ್ವಾನ ಮಾಡುತ್ತಿದ್ದಾರೆ. ಆ ದೃಷ್ಟಿಯಿಂದ ಈ ಸರ್ಕಾರ ಬುದ್ಧಿ ಕಲಿತು ಬೆಂಗಳೂರಿನ ಅಭಿವೃದ್ಧಿಗೆ ಒತ್ತುನೀಡಬೇಕು ಎಂದು ಅವರು ಆಗ್ರಹಿಸಿದರು.
 
ಇಂದು ಬೆಂಗಳೂರಿನ ಎಲ್ಲ ರಿಂಗ್ ರಸ್ತೆಗಳು, ಬೇರೆ ಬೇರೆ ರಸ್ತೆಗಳು ಗುಂಡಿ ಬಿದ್ದು ಅವ್ಯವಸ್ಥೆಯಾಗಿದೆ. ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ 25 ಅಥವಾ 50 ಕೋಟಿ ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ರಸ್ತೆ ಸರಿಪಡಿಸಲು ಒಂದೂ ಟೆಂಡರ್ ಕರೆದಿಲ್ಲ ಎಂದು ಆರೋಪಿಸಿದರು.
 
ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಈ ಹಿಂದೆ ಮಳೆಯಿಂದ ಸಮಸ್ಯೆಗಳಾಗಿದ್ದು, ಒಂದು ವರ್ಷದಲ್ಲಿ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಮತ್ತು ರಸ್ತೆಗಳಿಗೂ ಡಾಂಬರಿಕರಣ ಆಗಿರುವುದಿಲ್ಲ ಎಂದು ಆರೋಪಿಸಿದರು. ಸರ್ಕಾರ ಎರಡೂವರೆ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಬೆಂಗಳೂರು 10 ವರ್ಷಗಳ ಹಿಂದಕ್ಕೆ ಹೋಗುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಅವರು ಮಾಡಿದ್ದಾರೆ ಎಂದು ದೂರಿದರು.
 
ಬೆಂಗಳೂರಿನಲ್ಲಿರುವ ಜನರು ಶೇ.60 ರಷ್ಟು ತೆರಿಗೆಯನ್ನು ರಾಜ್ಯಕ್ಕೆ ಕಟ್ಟುತ್ತಿದ್ದಾರೆ. ಎಲ್ಲ ಸಾಫ್ಟ್‍ವೇರ್ ಕಂಪನಿಗಳ ಜೊತೆ ಮಾತನಾಡಿ ರಾಜ್ಯಕ್ಕೆ ಮರಳುವಂತೆ ಮಾಡಬೇಕೆ ಹೊರತು ನೋವು ಉಂಟುಮಾಡುವ ಹೇಳಿಕೆಯನ್ನು ನೀಡಬಾರದು. ಬದಲಾಗಿ ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ