ಕರಿಯ ಕುಮಾರಸ್ವಾಮಿ ಎಂದ ಸಚಿವ ಜಮೀರ್‌ ಅಹ್ಮದ್‌ಗೆ ಕಾಂಗ್ರೆಸ್‌ ಶಾಸಕನಿಂದ ಕ್ಲಾಸ್‌

Sampriya

ಮಂಗಳವಾರ, 12 ನವೆಂಬರ್ 2024 (19:32 IST)
Photo Courtesy X
ಮಂಡ್ಯ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮಾತನಾಡುವಾಗ ಮಾತಿನ ಭರದಲ್ಲಿ ಕರಿಯ ಎಂದು ನಿಂದಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ವಿವಾದ ಸೃಷ್ಟಿಸಿದ ಸಚಿವ ಜಮೀರ್ ವಿರುದ್ಧ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀರ್‌ ಹೇಳಿಕೆಗೆ ಇದೀಗ ಸ್ವಪಕ್ಷದಲ್ಲೇ ಆಕ್ರೋಶ  ವ್ಯಕ್ತವಾಗಿದೆ. ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ರ್ಯಾಲಿ ವೇಳೆ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಮಾತಿನ ಭರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡಿದ್ದು ಇದು ರಾಷ್ಟ್ರಮಟ್ಟದಲ್ಲಿ ವಿವಾದ ಹುಟ್ಟುಹಾಕಿದೆ.

ರಾಷ್ಟ್ರಮಟ್ಟದಲ್ಲಿ ಜನಾಂಗೀಯ ನಿಂದನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದ ಹಾಗೇ ಜಮೀರ್ ಕ್ಷಮೆಯಾಚಿಸಿದ್ದಾರೆ. ಇದೀಗ ಜಮೀರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ಗಣಿಗ ರವಿಕುಮಾರ್ ಜಮೀರ್ ಈ ರೀತಿ ಹೇಳಿರುವುದು ಅವರ ಘನತೆಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರ ಬಣ್ಣದ ಕುರಿತು ಜಮೀರ್ ಮಾತನಾಡಿರೋದು ದೊಡ್ಡ ತಪ್ಪು. ಯಾರೇ ಆಗಲಿ ಯಾವುದೇ ವ್ಯಕ್ತಿಯನ್ನು ಅವರ ಬಣ್ಣದಿಂದ ಹೀಯಾಳಿಸಬಾರದು. ಕರಿಯಣ್ಣ, ಕುಳ್ಳಣ್ಣ ಅಂತ ವೈಯಕ್ತಿಕವಾಗಿ ಮಾತನಾಡಿಕೊಳ್ಳುತ್ತಿದ್ದೆವು ಅಂತ ಜಮೀರ್ ಹೇಳಿದ್ದಾರೆ. ಆದರೆ ಸಾರ್ವಜನಿಕವಾಗಿ ಯಾಕೆ ಇಂತಹ ಹೇಳಿಕೆ ನೀಡುವ ಅವಶ್ಯಕತೆಯಿಲ್ಲ. ಚುನಾವಣೆ ಸಂದರ್ಭದಲ್ಲಿ ಟೀಕೆ ಟಿಪ್ಪಣಿ ಸಹಜ. ಟೀಕೆ ಟಿಪ್ಪಣಿ ಮೇಲೆ ಚುನಾವಣೆ ನಿರ್ಧಾರವಾಗಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ