ಸಿಎಂ ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡ್ತಿದ್ದಾರೆ : ಮೃತ್ಯುಂಜಯ ಸ್ವಾಮೀಜಿ
ಬುಧವಾರ, 11 ಜನವರಿ 2023 (09:40 IST)
ಹಾವೇರಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 2ನೇ ಬಾರಿ ಸಿಎಂ ಮನೆಯವರೆಗೆ ಪಾದಯಾತ್ರೆ ನಡೆಸಲು ಪಂಚಮಸಾಲಿ ಸಮುದಾಯ ಮುಂದಾಗಿದೆ.
2ಡಿ ಬೇಡ ನಮಗೆ 2ಎ ಮೀಸಲಾತಿ ಘೋಷಿಸಬೇಕು. ಸಿಎಂ ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ಪಂಚಮಸಾಲಿ ಸಮುದಾಯದ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕೆಂಡ ಕಾರಿದ್ದಾರೆ.
ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಸಾಲು ಸಾಲು ಹೋರಾಟ ಮಾಡಿದ್ರು. ಇವರ ಪ್ರತಿಭಟನೆಗೆ ಮಣಿದ ಸರ್ಕಾರ 2ಡಿ ಮೀಸಲಾತಿ ಘೋಷಿಸಿದೆ. ಆದರೆ, ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಸಮುದಾಯದವರು 2ಡಿ ಮೀಸಲಾತಿ ಬೇಡ. ನಮಗೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.
ಜನವರಿ 13ಕ್ಕೆ ಬಸವರಾಜ ಬೊಮ್ಮಾಯಿ ಕ್ಷೇತ್ರದ ಚೆನ್ನಮ್ಮ ವೃತ್ತದಿಂದ ಪಾದಯಾತ್ರೆ ಆರಂಭಿಸಿ, ಸಿಎಂ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ. ಮೀಸಲಾತಿಯ ಆದೇಶ ಪ್ರತಿ ನಮ್ಮ ಕೈಗೆ ಸಿಗೋವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.