ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಈ ಕ್ಷಣದಲ್ಲಿ ಹೇಳಿದರೆ, ಸಿದ್ಧರಾಮಯ್ಯ ಒಂದು ಕ್ಷಣವೇ ಕಾಂಗ್ರೆಸ್ ನಲ್ಲಿ ಇರುವುದಿಲ್ಲ. ಸಿದ್ಧರಾಮಯ್ಯ ಒಬ್ಬ ಅವಕಾಶವಾದಿ, ರಾಜಕಾರಣಿ ಎಂದು ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಕೆ.ಎಸ್. ಈಶ್ವರಪ್ಪ ಭಾಗಿಯಾಗಿ ಹೇಳಿಕೆ ನೀಡಿ, ನರೇಂದ್ರ ಮೋದಿ ಒಬ್ಬ ರಾಷ್ಟ್ರವಾದಿ, ಆದರೆ, ಚಾಮುಂಡೇಶ್ವರಿ ಜೊತೆಗೆ ಬಾದಾಮಿ ಕ್ಷೇತ್ರವನ್ನು ಹಠ ಮಾಡಿ ಪಡೆದ ಸಿದ್ಧರಾಮಯ್ಯ ಜಾತಿವಾದಿ ಯಾಗಿದ್ದಾರೆ.
ರಾಜಕೀಯದಲ್ಲಿ ದ್ವೇಷ ಸಾಧಿಸುವುದು ಒಳ್ಳೆಯದಲ್ಲ. ಸ್ವಾತಂತ್ರ ಹೋರಾಟದ ಕಾಂಗ್ರೆಸ್ ಗೂ ಈಗಿನ ಕಾಂಗ್ರೆಸ್ ಗೂ ಶೇ. ಒಂದರಷ್ಟು ಸಾಮ್ಯತೆ ಇಲ್ಲ. ಇಂದಿರಾಗಾಂಧಿ ಮೊಮ್ಮಗ ಎಂಬುದನ್ನು ಬಿಟ್ಟರೆ ರಾಹುಲ್ ಗಾಂಧಿ ಏನು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಈಗಿನ ಸರ್ಕಾರವನ್ನ ನೋಡಿದಾಗ ಹೇಳುವುದಕ್ಕು ಮಾಡುವುದಕ್ಕು ಸಂಬಂಧವಿಲ್ಲ ಎಂಬುದು ತಿಳಿದುಬರುತ್ತೆ. ಈ ಚುನಾವಣೆಯಲ್ಲ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ, ಶಿವಮೊಗ್ಗದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲುವು ಬಿಜೆಪಿಯದೇ ಎಂದರು.
ರಾಯಣ್ಣ ಬ್ರಿಗೇಡ್ ಗು ಬಿಜೆಪಿಗೂ ಸಂಬಂಧ ಇಲ್ಲ. ನನ್ನ ಭಾವನೆಯನ್ನು ನಾನು ಸ್ಪಷ್ಟ ನೇರವಾಗಿ ಹೇಳುವುದು ನನ್ನ ಸ್ವಭಾವ. ಅದು ಕೆಲವೊಬ್ರಿಗೆ ಖುಷಿ ಕೊಡುತ್ತೆ ಮತ್ತೆ ಕೆಲವರಿಗೆ ಬೇಸರವಾಗುತ್ತದೆ. ವರುಣಾ ಕ್ಷೇತ್ರದಲ್ಲಿ ವಿಜೇಂದ್ರರನ್ನು ನಿಲ್ಲಿಸಬೇಕು ಎಂದು ಬಹಳ ಬೇಡಿಕೆ ಇತ್ತು. ಆದ್ರೆ ನಾಮಪತ್ರ ಸಲ್ಲಿಸುವ ವೇಳೆ ದೆಹಲಿಯಿಂದ ವಿಜೇಂದ್ರ ನಾಮಪತ್ರ ಸಲ್ಲಿಸುವುದು ಬೇಡ ಅಂತ ಕರೆಬಂತು. ಮೊದಲೇ ವಿಜೇಂದ್ರ ನಾಮಪತ್ರ ಸಲ್ಲಿಸುವುದು ಬೇಡ ಅಂತ ಹೇಳಿದ್ರೆ ನಾವು ಆ ಪ್ರಯತ್ನವನ್ನೆ ಮಾಡುತ್ತಿರಲಿಲ್ಲ ಎಂದರು.
ಯಡಿಯೂರಪ್ಪ, ಅನಂತಕುಮಾರ್ ನಡುವೆ ಯಾವ ಅಸಮಾಧಾನ ಇಲ್ಲ, ಮಾಧ್ಯಮದವರು ಸುಳ್ಳು ಸುದ್ದಿ ಮಾಡಿದ್ದಾರೆ. ಬೇಳೂರು ಗೋಪಾಲ ಕೃಷ್ಣರಿಗೆ ಪಕ್ಷ ಬಿಡಬೇಡಿ ಅಂತ ಹೇಳಿದ್ದೆ ಆದ್ರು ಹೋಗಿದ್ದಾರೆ. ಅವರಿಗೆ ಒಳ್ಳೆದಾಗ್ಲಿ.ಆತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಮಾಡಿದ್ದಾರೆ. ನಮ್ಮ ಪಕ್ಷ ಆಡಳಿತಕ್ಕೆ ಬಂದ್ರೆ ಶಿವಮೊಗ್ಗ ಸೇರಿದಂತೆ ಇಡಿ ರಾಜ್ಯಕ್ಕೆ ಮರಳು ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.