ಬೆಂಗಳೂರು: ಮುಡಾ ಹಗರಣದಲ್ಲಿ ತನ್ನ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಮುಗಿಬಿದ್ದಿದ್ದಾರೆ. ಬಿಜೆಪಿಯವರು ದೇಶದ್ರೋಹಿಗಳು ಎಂದಿದ್ದಾರೆ.
ದೇಶದ್ರೋಹಿ ಬಿಜೆಪಿಯವರು ನಂಗೆ ಏನೂ ಮಾಡಕ್ಕಾಗಲ್ಲ. ಸುಳ್ಳು ಕೇಸ್ ಹಾಕಿಸಿ ನನ್ನ ಮಟ್ಟ ಹಾಕಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಹಿಂದೆಯೂ ದೇಶದ್ರೋಹಿಗಳಿದ್ದರು. ಈಗಲೂ ಇದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬ್ರಿಟಿಷರ ವಿರುದ್ಧ ರಾಯಣ್ಣನನ್ನು ಹಿಡಿದುಕೊಟ್ಟಿದ್ದು ನಮ್ಮವರೇ. ನಮ್ಮವರನ್ನು ಬಳಸಿಕೊಂಡು ಬ್ರಿಟಿಷರು ನಮ್ಮನ್ನು ಆಳಿದರು. ಆಗಲೂ ದೇಶದ್ರೋಹಿಗಳಿದ್ದರು. ಈಗಲೂ ಇದ್ದಾರೆ. ದೇಶ ದ್ರೋಹಿ ಬಿಜೆಪಿಯವರು ನನ್ನನ್ನು ಅಲ್ಲಾಡಿಸಲು ನೋಡುತ್ತಿದ್ದಾರೆ. ಆದರೆ ಅವರಿಗೆ ನನ್ನನ್ನು ಮುಟ್ಟೊಕ್ಕೂ ಆಗಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಾನು ಮಂತ್ರಿಯಾಗಿ 40 ವರ್ಷ ಆಯಿತು. ಇದುವರೆಗೆ ಒಂದು ಕಪ್ಪು ಚುಕ್ಕೆ ಇಲ್ಲ. ಇಷ್ಟು ವರ್ಷ ಮಾಡದ ತಪ್ಪು ಈಗ ಮಾಡ್ತೀನಾ? ನಾನು ಮಾಡದಿರುವ ತಪ್ಪನ್ನು ಸಂಚು ಮಾಡಿ ನನ್ನ ತಲೆಗೆ ಕಟ್ಟಲು ಬಿಜೆಪಿ-ಜೆಡಿಎಸ್ ಪ್ರಯತ್ನಿಸುತ್ತಿದೆ. ನನ್ನನ್ನು ಇದುವರೆಗೆ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗಿಲ್ಲ. ಈಗ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಅವಕಾಶ ಕೊಡಬಾರದು ಎಂದಿದ್ದಾರೆ.