ನಮಗೆ ಹಿಡಿಶಾಪ ಹಾಕುವವರಿಗೆ ಹಾಸನಾಂಬೆ ತಕ್ಕ ಶಾಸ್ತಿ ಮಾಡಲಿ ಎಂದು ಕೇಳಿಕೊಂಡೆ: ಸಿಎಂ ಸಿದ್ದರಾಮಯ್ಯ

Krishnaveni K

ಮಂಗಳವಾರ, 29 ಅಕ್ಟೋಬರ್ 2024 (09:41 IST)
Photo Credit: X
ಹಾಸನ: ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ನಮಗೆ ಹಿಡಿಶಾಪ ಹಾಕುವವರಿಗೆ ದೇವರು ತಕ್ಕ ಶಾಸ್ತಿ ಮಾಡಲಿ ಎಂದು ಕೇಳಿಕೊಂಡಿರುವುದಾಗಿ ಹೇಳಿದ್ದಾರೆ. ಹಾಸನಾಂಬೆ ದರ್ಶನದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿಒಳ್ಳೆ ಮಳೆ ಬೆಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿವೆ.  ಜಲಾಶಯಗಳಲ್ಲಿ ಶೇ. 90 ರಷ್ಟು ನೀರು ತುಂಬಿದೆ ಎಂದರು. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದಾಗ , ಬಡವರ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು.   

2023 ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ, ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ಜಾತಿ ಧರ್ಮದ ಭಾಷೆಯ ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗಿದೆ ಎಂದರು.
 
ಟೀಕೆಗಳನ್ನು ಮೆಟ್ಟಿ ನಿಂತು ಗ್ಯಾರಂಟಿಗಳ ಜಾರಿ
 
ಅಧಿಕಾರಕ್ಕೆ ಬಂದ ಎಂಟು ತಿಂಗಳೊಳಗಾಗಿ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. ಈ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತದೆ , ದಿವಾಳಿಯಾಗುತ್ತದೆ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಆ ಎಲ್ಲ ಟೀಕೆಗಳನ್ನು ಮೆಟ್ಟಿ ನಿಂತು, ಗ್ಯಾರಂಟಿಗಳನ್ನು ಜಾರಿ ಮಾಡಿ , ಬಡವರಿಗೆ ಶಕ್ತಿ ತುಂಬಲಾಗಿದೆ. ಬಡವರು ಖುಷಿಯಾಗಿದ್ದು, ಸಮಾಧಾನದಿಂದ್ದಾರೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಸಮಾಧಾನವಾದಂತಿಲ್ಲ. ನಮ್ಮ ಸರ್ಕಾರ ಬಡವರ ಪರವಾಗಿ , ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದು, ಸಾಮಾಜಿಕ ನ್ಯಾಯ ಹಾಗೂ ಬಡವರ ಪರವಾಗಿಲ್ಲದವರಿಗೆ  ಇದರಿಂದ ಸಮಾಧಾನವಿಲ್ಲದಂತಾಗಿದೆ ಎಂದರು.
 
ದ್ವೇಷ ಬಿತ್ತುವವರಿಗೆ ತಕ್ಕ ಶಾಸ್ತಿಯಾಗಬೇಕು
 
ನಾನು ಎರಡನೇ ಬಾರಿಗೆ ಹಾಸನಾಂಬ ದೇವಿ, ಸಿದ್ದೇಶ್ವರಸ್ವಾಮಿ, ಗಣಪತಿ ದೇವರ ದರ್ಶನವನ್ನು ಪಡೆದು, ರಾಜ್ಯದ ಎಲ್ಲ ಜನತೆಗೆ ಸನ್ಮಂಗಳ ಉಂಟು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ನಾವು ಮನುಜರಾಗಿ ಪರಸ್ಪರ ದ್ವೇಷ ಇರಬಾರದು. ಸಮಾಜದಲ್ಲಿ ದ್ವೇಷವನ್ನು ಬಿತ್ತುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಶಾಸ್ತಿ ಮಾಡುವಂತೆ ದೇವರನ್ನು ಕೋರಿದ್ದೇನೆ. ಈ ಬಾರಿ ದಸರಾ ಉತ್ಸವದಂತೆ ಹಾಸನಾಂಬ ಜಾತ್ರೆಯನ್ನೂ ಅದ್ದೂರಿಯಾಗಿ ಆಯೋಜಿಸಲಾಗಿದೆ. ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದರು.
 
ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು
 
ಹಾಸನದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳನ್ನು ಈ ಸಂದರ್ಭದಲ್ಲಿ  ಮುಖ್ಯಮಂತ್ರಿಗಳು ಅಭಿನಂದಿಸಿದರು. ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿದಾಗ ಮಾತ್ರು ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ