ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲ ಮೊನ್ನೆಯಷ್ಟೇ ಓಪನ್ ಆಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪ್ರತಿನಿತ್ಯ ದೇವಿಯ ದರ್ಶನಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಕುಮಾರಸ್ವಾಮಿ ತಮ್ಮ ಪತ್ನಿ, ಸೊಸೆ, ಮೊಮ್ಮಗನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಗ ನಿಖಿಲ್ ಗಾಗಿ ವಿಶೇಷ ಪ್ರಾರ್ಥನೆ ನಡೆಸಿದ್ದಾರೆ.
ದೇವಿಯ ಎದುರು ಕುಮಾರಸ್ವಾಮಿ ಕುಟುಂಬ ಕೆಲವು ಸಮಯ ನಿಂತಿದ್ದು, ಸೀರೆ, ಹೂ, ಹಣ್ಣು ಅರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಮತ್ತು ಕುಟುಂಬದವರಿಗೆ ಅರ್ಚಕರು ಹೂ ಮಾಲೆ ಹಾಕಿ ಸನ್ಮಾನವನ್ನೂ ಮಾಡಿದರು. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಗೆ ಎಲ್ಲಾ ಭಕ್ತರೂ ಒಂದೇ ಅಲ್ವಾ? ಯಾಕೆ ವಿಐಪಿಗಳಿಗೆ ಮಾತ್ರ ಈ ರೀತಿ ಹಾರ ಹಾಕಿ ಸನ್ಮಾನ? ಅದೇ ಹಾರವನ್ನು ದೇವಿಗೆ ಹಾಕಿ ಪೂಜೆ ಮಾಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಮಂದಿ ಬರುತ್ತಿದ್ದು, ಎಲ್ಲರಿಗೂ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ಸಾಮಾನ್ಯ ದರ್ಶನಕ್ಕೆ, ಪಾಸ್ ಪಡೆದು ದರ್ಶನ ಪಡೆಯುವವರಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ಸರತಿ ಮಾಡಲಾಗಿದೆ.