ಮೈಸೂರು: ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಸುಮ್ನೇ ನನ್ನ ಹೆಂಡ್ತಿ ಹೆಸರು ಎಳೆದು ತರಲಾಗುತ್ತಿದೆ ಎಂದಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಹೆಸರಿನಲ್ಲಿ ಅಕ್ರಮವಾಗಿ ಸೈಟು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಈ ವೇಳೆ ಬಿಜೆಪಿಯವರು ಮೈಸೂರಿನಲ್ಲಿ ನಡೆಸಲಿರುವ ಪ್ರತಿಭಟನೆ ಬಗ್ಗೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದರ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ಸುಮ್ಮನೇ ನನ್ನ ಹೆಂಡತಿ ಹೆಸರು ಎಳೆದು ತರಲಾಗುತ್ತಿದೆ. ಎಲ್ಲವೂ ಕಾನೂನಾತ್ಮಕವಾಗಿ ನಡೆದಿದೆ. ಹೀಗಿರುವಾಗ ವಿವಾದ ಎಲ್ಲಿಂದ ಬಂತು? ಬಿಜೆಪಿಯವರು ಸುಮ್ಮನೇ ವಿವಾದ ಮಾಡುತ್ತಿದ್ದಾರೆ ಎಂದರು.
ಇನ್ನು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯದ ಬಗ್ಗೆಯೂ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾರೆ. ಈ ಮೊದಲು ಇದೇ ಸಿಬಿಐಯನ್ನು ಬಿಜೆಪಿಯವರು ಚೋರ್ ಬಚಾವೋ ಸಂಸ್ಥೆ ಎಂದಿದ್ದರು. ಇದೀಗ ಅವರೇ ಸಿಬಿಐಗೆ ಕೊಡಿ ಅಂತಿದ್ದಾರೆ. ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿಲ್ಲವೇ? ಸಿಬಿಐ ನಿರ್ದೇಶಕರೂ ನಮ್ಮ ಕರ್ನಾಟಕದಲ್ಲಿ ಕೆಲಸ ಮಾಡಿ ಹೋದವರೇ. ಈ ಪ್ರಕರಣವನ್ನು ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.