ಪ್ರತಿಭೆ ಯಾರ ಸ್ವತ್ತೂ ಅಲ್ಲ ಎನ್ನುವುದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ: ಸಿದ್ದರಾಮಯ್ಯ

Krishnaveni K

ಮಂಗಳವಾರ, 14 ಅಕ್ಟೋಬರ್ 2025 (16:54 IST)
ಬೆಂಗಳೂರು: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಇದಕ್ಕೆ ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವ್ಯಾಸರೇ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡ ಉದ್ಘಾಟಿಸಿ ಸಿಎಂ ಮಾತನಾಡಿದರು.

ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ನಿಮ್ಮ‌ ಹಾಗೂ ಸಮಾಜದ ಪ್ರಗತಿ ಸಾಧ್ಯ. ಈ ದಿಕ್ಕಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಸಮಾಜವನ್ನು ಮುನ್ನಡೆಸಬೇಕು.

ವಿಜ್ಞಾನದ ಓದು ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ‌. ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣವು ಸಮಾಜದ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯ.

ವಿಜ್ಞಾನ ಓದಿದವರೂ ಮೂಢನಂಬಿಕೆ ಮತ್ತು ಕಂದಾಚಾರಕ್ಕೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆಯಾಗಿದೆ‌. ಬಹಳ ಹಿಂದೆಯೇ ಬಸವಾದಿ ಶರಣರು ಮೌಡ್ಯ, ಕಂದಾಚಾರಗಳ ವಿರುದ್ಧದ ಹೋರಾಟಕ್ಕೆ ಕರೆ ನೀಡಿದರು. ಆದರೆ, ಇವತ್ತಿಗೂ ಮೌಢ್ಯ ಹೋಗಿಲ್ಲ. ಏಕೆಂದರೆ ನಮ್ಮದು ಜಾತಿ ತಾರತಮ್ಯದ ಸಮಾಜ ಆಗಿರುವುದರಿಂದ ಇದಕ್ಕೆ ಚಲನೆ ಇಲ್ಲ. ಪಟ್ಟಭದ್ರರು ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಮೌಢ್ಯವನ್ನು ಬಿತ್ತುತ್ತಾರೆ.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ "ಮೌಡ್ಯ ನಿಷೇಧ ಕಾಯ್ದೆ" ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಮೌಢ್ಯ ಮತ್ತು ಮೌಢ್ಯ ಬಿತ್ತುವ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ.

52 ಕೋಟಿ ಅಂದಾಜಿನಲ್ಲಿ 7 ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಲಾಗಿದೆ. ಎಂಟನೇ ಅಂತಸ್ತನ್ನು ನಿರ್ಮಿಸಲು 8 ಕೋಟಿ ರೂಪಾಯಿಗೆ ಬೇಡಿಕೆ ಸಲ್ಲಿಸಿದ್ದಾರೆ.  ಸರ್ಕಾರ ಈ ಕೊಡಲು ಸಿದ್ಧವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ