ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಸರ್ಕಾರೀ ಆಸ್ಪತ್ರೆಗೆ ಯಾಕೆ ಹೋಗಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಹೃದಯಾಘಾತದ ವಿಚಾರ ಸದ್ದು ಮಾಡುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಸಿದ್ದರಾಮಯ್ಯ ಎಂದಿನಂತೆ ತಮ್ಮ ಮಂಡಿನೋವಿನ ಸಮಸ್ಯೆಗೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಪುತ್ರ ಯತೀಂದ್ರ ಮತ್ತು ಸಚಿವ ಜಮೀರ್ ಅಹ್ಮದ್ ಕೂಡಾ ಸಾಥ್ ನೀಡಿದ್ದಾರೆ. ಸರ್ಕಾರೀ ಕಾರಿನಲ್ಲಿ ಸಿಎಂ ಮತ್ತು ಸಚಿವರ ದಂಡು ಆಸ್ಪತ್ರೆಗೆ ಬಂದು ತಪಾಸಣೆ ಮುಗಿಸಿಕೊಂಡು ತೆರಳಿದೆ. ಈ ವೇಳೆ ಮುಖ್ಯಮಂತ್ರಿಗಳು ಮಾಧ್ಯಮಗಳತ್ತ ಕೈ ಬೀಸಿದರು.
ಇನ್ನು, ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಬಂದಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನ ಟೀಕಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಯಾಕೆ ಭೇಟಿ ನೀಡಲ್ಲ? ಅಂದರೆ ನೀವೇ ಸರ್ಕಾರೀ ಆಸ್ಪತ್ರೆಗಳ ಗುಣಮಟ್ಟ ಚೆನ್ನಾಗಿಲ್ಲ ಅಂತೀರಾ? ಬಡವರಿಗೆ ಮಾತ್ರ ಸರ್ಕಾರೀ ಆಸ್ಪತ್ರೆ ಇರೋದಾ? ಇದರ ಬದಲು ನೀವು ಮುಖ್ಯಮಂತ್ರಿಯಾಗಿ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ ಇತರರಿಗೆ ಮಾದರಿಯಾಗಬಹುದಲ್ವೇ ಎಂದು ಟೀಕಿಸಿದ್ದಾರೆ.