ದಕ್ಷಿಣ ಭಾರತಕ್ಕೆ ಸಿಎಂ ಸಿದ್ದು ನೇತೃತ್ವದಲ್ಲಿ ಪ್ರತ್ಯೇಕ ಒಕ್ಕೂಟ ರಚನೆ

Krishnaveni K

ಮಂಗಳವಾರ, 6 ಫೆಬ್ರವರಿ 2024 (10:00 IST)
ಬೆಂಗಳೂರು: ನನ್ನ ತೆರಿಗೆ ನನ್ನ ಹಕ್ಕು ಹೋರಾಟವನ್ನು ದೆಹಲಿಯಲ್ಲಿ ಬೃಹತ್ ಮಟ್ಟದಲ್ಲಿ ನಡೆಸಲು ಮುಂದಾಗಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ನಾಳೆ ದಿನಾಂಕ ನಿಗದಿಪಡಿಸಿದೆ.

ನಾಳೆ ದೆಹಲಿಯ ಜಂತರ್ ಮಂಥರ್ ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚಲೋ ದಿಲ್ಲಿ ಹೋರಾಟ ನಡೆಯಲಿದೆ. ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯ, ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಭಾರತಕ್ಕೆ ಪ್ರತ್ಯೇಕ ಒಕ್ಕೂಟ ರಚನೆ
ಕರ್ನಾಟಕ ಕಾಂಗ್ರೆಸ್ ನೇತೃತ್ವದಲ್ಲಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ಒಕ್ಕೂಟ ರಚನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಕ್ಷಿಣ ಭಾರತದ ಮೇಲೆ ಉತ್ತರ ಭಾರತೀಯರ ಧೋರಣೆ ಖಂಡಿಸಿ ಪ್ರತಿಭಟನೆ ಜೊತೆಗೆ ಈ ಪ್ರತಿಭಟನೆಗೆ ಬಲ ತುಂಬಲು ಒಕ್ಕೂಟ ರಚನೆ ಮಾಡಲು ಮುಂದಾಗಿದೆ. ಈ ಮೂಲಕ ದಕ್ಷಿಣ ಭಾರತದ ಧ್ವನಿಯಾಗಲು ಹೊರಟಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿಗಳಿಂದ ದಿವಾಳಿಯಾಗಿದ್ದಕ್ಕೆ ಈ ನಾಟಕ ಎಂದ ಬಿಜೆಪಿ
ರಾಜ್ಯ ಸರ್ಕಾರ ಜನರಿಗೆ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ದಿವಾಳಿಯಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ದಾರಿ ಹುಡುಕುತ್ತಿದೆ. ಇದಕ್ಕಾಗಿಯೇ ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಅದಕ್ಕೇ ತೆರಿಗೆ ತಾರತಮ್ಯದ ನಾಟಕವಾಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಲೋಕಸಭೆಗೆ ಕೇಂದ್ರದ ವಿರುದ್ಧ ದಕ್ಷಿಣ ಭಾರತದ ಅಸ್ತ್ರ
ರಾಮಮಂದಿರ ನಿರ್ಮಾಣದ ಬಳಿಕ ಪ್ರಧಾನಿ ಮೋದಿ ಸರ್ಕಾರದ ಪರವಾದ ಅಲೆಯಿದೆ. ಇದು ಕಾಂಗ್ರೆಸ್ ಗೆ ಮುಳುವಾಗಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಬಹುದು. ಹೀಗಾಗಿ ಈಗ ತೆರಿಗೆ ತಾರತಮ್ಯ ಅಸ್ತ್ರ ಬಳಸಿ ಕೇಂದ್ರ ವಿರುದ್ಧ ಹೋರಾಡಲು ತಯಾರಿ ನಡೆಸಿದೆ ಎಂದರೂ ತಪ್ಪಿಲ್ಲ. ಆದರೆ ಈ ಹೋರಾಟದಿಂದ ಪ್ರತ್ಯೇಕ ರಾಷ್ಟ್ರದ ಭಾವನೆ ಜನರಲ್ಲಿ ಬೆಳೆದು, ದೇಶ ಒಡೆಯದೇ ಇದ್ದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ