ನವದೆಹಲಿ: ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಇಲಾಖೆಯನ್ನು ನನ್ನಿಷ್ಟ ಬಂದ ಹಾಗೆ ನಡೆಸಲಾಗದು. ಹಣಕಾಸು ಆಯೋಗದ ಸಲಹೆಗಳನ್ನು ಪರಿಗಣಿಸಿ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಅನುದಾನ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಇಲಾಖೆ ಇಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವಾಗ ಯಾರಿಗೂ ಅನ್ಯಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಲೇ ಇದ್ದು, ಕೇಂದ್ರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ನಿನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲೂ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.
ಇದರ ಬೆನ್ನಲೇ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಟೀಕೆಗಳಿಗೆ ಉತ್ತರಿಸಿದ್ದಾರೆ. ಕೆಲವರು ಸ್ವಹಿತಾಸಕ್ತಿಯಿಂದ ಕಟ್ಟುಕತೆ ಕಟ್ಟಿ ಹರಿಯಬಿಡುತ್ತಿದ್ದಾರೆ. ಹಣಕಾಸು ಆಯೋಗದ ಸಲಹೆಗಳನ್ನು ಯಾವ ವಿತ್ತ ಸಚಿವರೂ ತಳ್ಳಿ ಹಾಕಲಾಗದು. ಹಣಕಾಸು ಸಚಿವೆಯಾಗಿ ನಾನು ಮಧ‍್ಯಪ್ರವೇಶಿಸಿ ಹಣಕಾಸು ಆಯೋಗಕ್ಕೆ ಈ ರಾಜ್ಯಗಳಿಗೆ ಹಣ ಕೊಡಬೇಡಿ ಎಂದು ಹೇಳಲಾಗದು ಎಂದಿದ್ದಾರೆ. ಆ ರೀತಿ ಹೇಳಲು ನನಗೆ ಅಧಿಕಾರವಿಲ್ಲ. ನಾನು ಶೇ.100 ರಷ್ಟು ನಿಯಮದ ಪ್ರಕಾರವೇ ನಡೆದುಕೊಂಡಿದ್ದೇನೆ ಎಂದು ಗುಡುಗಿದ್ದಾರೆ.