ರಾಜ್ಯ ಕಾಂಗ್ರೆಸ್ ಗೆ ‘ಪೇಸಿಎಂ’ ನಂತೇ ವರ್ಕೌಟ್ ಆಗುತ್ತಾ ‘ನಮ್ಮ ತೆರಿಗೆ ನಮ್ಮ ಹಕ್ಕು’ ಕ್ಯಾಂಪೈನ್

Krishnaveni K

ಸೋಮವಾರ, 5 ಫೆಬ್ರವರಿ 2024 (10:46 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಅಂದು ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ‘ಪೇಸಿಎಂ’ ಅಭಿಯಾನ ಮಾಡಿ ಸಕ್ಸಸ್ ಕಂಡಿದ್ದರು.

ಇದೀಗ ರಾಜ್ಯ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದ ಅಸ್ತ್ರ ಪ್ರಯೋಗಿಸಿದೆ. ಕೇಂದ್ರ ಸರ್ಕಾರ ತೆರಿಗೆ ಸಂಗ್ರಹ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬುದನ್ನೇ ದೊಡ್ಡದಾಗಿ ಬಿಂಬಿಸಿ ಮೋದಿಗೆ ದಕ್ಷಿಣ ಭಾರತದಲ್ಲಿ ಬಾಗಿಲ್ ಬಂದ್ ಮಾಡಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರೇ ನೇತೃತ್ವ ವಹಿಸಿದ್ದಾರೆ. ಉತ್ತರ ಭಾರತದಂತೇ ಇತ್ತೀಚೆಗಿನ ದಿನಗಳಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಗೆಲುವು ಸಿಕ್ಕಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಆರಂಭಿಸಲಾಗಿದೆ.

ಇತ್ತೀಚೆಗೆ ಸಂಸದ ಡಿಕೆ ಸುರೇಶ್ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡುತ್ತಿದೆ. ಹೀಗಾದರೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯಿಡಬೇಕಾಗುತ್ತದೆ ಎಂದಿದ್ದರು. ಅವರ ಹೇಳಿಕೆ ಭಾರೀ  ವಿವಾದಕ್ಕೆ ಗುರಿಯಾಗಿತ್ತು. ಅದನ್ನು ಸಮರ್ಥಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರೂ ಇರಲಿಲ್ಲ. ಹೀಗಾಗಿ ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನದ ಮೂಲಕ ಪರೋಕ್ಷವಾಗಿ ಡಿಕೆ ಸುರೇಶ್ ಹೇಳಿಕೆಗೆ ಸಪೋರ್ಟಿವ್ ಆಗಿ ಅಭಿಯಾನ ಶುರು ಮಾಡಲಾಗಿದೆ.

ಇದಕ್ಕೆ ನೆಟ್ಟಿಗರೂ ಸಾಥ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಆಗುತ್ತಿದೆ ಎನ್ನಲಾದ ಅನ್ಯಾಯಕ್ಕೆ ಬೆಂಬಲವಾಗಿ ಅಂಕಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ನಾಲ್ಕು ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜೊತೆಗೆ ಕೇಂದ್ರದ ಅನ್ಯಾಯದ ವಿರುದ್ಧ ಕಾಂಗ್ರೆಸ್ ಜಿಲ್ಲಾಮಟ್ಟದಲ್ಲೇ ಹೋರಾಟ ನಡೆಸಲು ಆಯಾ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಆ ಮೂಲಕ ಕೇಂದ್ರದ ವಿರುದ್ಧ ತಳಮಟ್ಟದಿಂದಲೇ ಹೋರಾಟ ನಡೆಸಿ ಈ ಅಭಿಯಾನವನ್ನು ದಿಲ್ಲಿಗೆ ತಲುಪಿಸುವ ಗುರಿ ಹಾಕಿಕೊಂಡಿದೆ.

ಯಶಸ್ವಿಯಾಗಿದ್ದ ಪೇ ಸಿಎಂ
ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪೇ ಸಿಎಂ ಎಂಬ ಅಭಿಯಾನ ಮಾಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಟೆಂಡರ್ ಗಳಿಗೂ ಶೇ.40 ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಅಭಿಯಾನ ನಡೆಸಿತ್ತು. ಈ ಮೂಲಕ ಬಿಜೆಪಿ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈಗ ತೆರಿಗೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ