ಹೂ ಮಾರುತ್ತಿದ್ದ ಪುಟ್ಟ ಬಾಲಕಿ ಕಂಡು ಸಿಎಂ ಕಾರು ನಿಲ್ಲಿಸಿದ್ದು ಏಕೆ?

ಬುಧವಾರ, 29 ಆಗಸ್ಟ್ 2018 (19:22 IST)
ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಕಂಡು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಕಾರನ್ನು ನಿಲ್ಲಿಸಿದರು. ಬಾಲಕಿಯ ಕಷ್ಟ ಸುಖ ವಿಚಾರಿಸಿ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದ ಘಟನೆ ನಡೆಯಿತು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೂಳ ಗ್ರಾಮದ ಬಳಿ ಈ ಪ್ರಸಂಗ ನಡೆದಿದೆ.

ಕೆ.ಆರ್.ಎಸ್‌ನಿಂದ ರಾಮನಗರಕ್ಕೆ ಹೋಗುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಬೆಳಗೂಳ ಗ್ರಾಮದ ಬಳಿ ರಸ್ತೆ ಬದಿ  ಹೂವನ್ನು ಮಾರುತ್ತಿದ್ದಳು. ಚಿಕ್ಕ ಬಾಲಕಿ ಶಾಲೆಗೆ ಹೋಗುವುದು ಬಿಟ್ಟು ಹೂವನ್ನು ಮಾರುತ್ತಿರುವುದನ್ನು ಗಮನಿಸಿ ತಕ್ಷಣ ಕಾರು ನಿಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೊದಲು ಬಾಲಕಿಯ ಬಳಿ ಹೂವನ್ನು ಕೊಂಡುಕೊಂಡಿದ್ದಾರೆ. ನಂತ್ರ ಬಾಲಕಿಯ ಬಳಿ ಆಕೆಯ ಕಷ್ಟ ಸುಖ ವಿಚಾರಿಸಿದ್ದಾರೆ. ಬಾಲಕಿ ಶಾಲೆಯ ರಜಾ ದಿನ ಮತ್ತು ಬಿಡುವಿನ ವೇಳೆ ಹೂವು ಮಾರುವುದಾಗಿ ತಿಳಿಸಿ ಮನೆಯ ಸಂಕಷ್ಟ ವಿವರಿಸಿದ್ದಾಳೆ. ಬಾಲಕಿಯ ಬಡತನದ ಬಗ್ಗೆ ಕೇಳಿ ಮರುಗಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಥಳದಲ್ಲಿದ್ದವರಿಗೆ ಬಾಲಕಿಯ ತಂದೆಗೆ ತನ್ನನ್ನು ಕಾಣುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ.

ಸಿ.ಎಂಕುಮಾರಸ್ವಾಮಿ‌ ಮಾತನಾಡಿಸಿದ್ದಕ್ಕೆ ಹೂ ಮಾರುತ್ತಿದ್ದ ಬಾಲಕಿ ಶಾಬಾಬ್ತಾಜ್ ಸಂತಸಗೊಂಡ್ರೆ, ಸ್ಥಳೀಯರು ಸಿ.ಎಂ. ಹೃದಯ ವೈಶಾಲ್ಯತೆ ಕಂಡು‌ ಮೂಕ ವಿಸ್ಮಿತರಾಗಿದ್ದಾರೆ. ಸ್ಥಳದಲ್ಲಿದ್ದವರೊಬ್ಬರು ಮುಖ್ಯಮಂತ್ರಿಗಳು ಬಾಲಕಿಯನ್ನು ಮಾತನಾಡಿಸುತ್ತಿರುವ ಫೋಟೋ ತೆಗೆದು ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ