ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಭಾರೀ ಏರಿಕೆ, ಕಾಯಿಯೂ ಬರ್ತಿಲ್ಲ

Krishnaveni K

ಶನಿವಾರ, 8 ಮಾರ್ಚ್ 2025 (10:21 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಈಗ ತೆಂಗಿನ ಕಾಯಿ ಭಾರೀ ದುಬಾರಿಯಾಗಿದೆ. ಮಾರುಕಟ್ಟೆಗೂ ತೆಂಗಿನಕಾಯಿ ಬರೋದೇ ಕಡಿಮೆಯಾಗಿದೆ. ಇದೀಗ ತೆಂಗಿನಕಾಯಿ ದರ ಎಷ್ಟಿದೆ ಇಲ್ಲಿದೆ ವಿವರ.

ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಬಹುತೇಕ ಕಡೆ ತೆಂಗಿನಕಾಯಿ ಬೆಲೆಯಲ್ಲಿ ವ್ಯಾಪಕವಾಗಿ ಏರಿಕೆಯಾಗುತ್ತಲೇ ಇದೆ. ಉತ್ತಮ ಗುಣಮಟ್ಟದ ಕಾಯಿಯೂ ಬರುತ್ತಿಲ್ಲ. ಇದೇ ಕಾರಣಕ್ಕೆ ಬೆಲೆಯಲ್ಲೂ ಏರಿಕೆಯಾಗುತ್ತಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

ಕಳೆದ ತಿಂಗಳು ಸಾಮಾನ್ಯ ಗಾತ್ರದ ತೆಂಗಿನಕಾಯಿಗೆ 40 ರೂ.ಗೆ ಏರಿಕೆಯಾಗಿತ್ತು. ಆದರೆ ಈ ತಿಂಗಳು ಇದೇ ಕಾಯಿಯ ಬೆಲೆ 50 ರೂ.ಗೆ ಏರಿಕೆಯಾಗಿದೆ. ದೊಡ್ಡ ಗಾತ್ರದ ತೆಂಗಿನಕಾಯಿ ಬೆಲೆಯಂತೂ 60-70 ರೂ.ಗಳಷ್ಟಿದೆ. ಬೆಲೆ ಏರಿಕೆಯಿಂದಾಗಿ ಜನ ಕೊಳ್ಳುವುದೂ ಕಡಿಮೆಯಾಗಿದೆ.

ಮೊದಲೆಲ್ಲಾ ಸಣ್ಣ ಪುಟ್ಟ ಕೈ ಗಾಡಿಗಳಲ್ಲೂ ತೆಂಗಿನಕಾಯಿ ಇತ್ತು. ಆದರೆ ಈಗ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ತೆಂಗಿನಕಾಯಿಯೇ ಸಿಗುತ್ತಿಲ್ಲ. ಬೇಸಿಗೆಯಲ್ಲಿ ತೆಂಗಿನಕಾಯಿಯನ್ನು ಹಾಳಾಗದಂತೆ ಇಡುವುದೂ ದೊಡ್ಡ ತಲೆನೋವು. ಬೆಲೆಯೂ ದುಬಾರಿಯಾಗಿರುವುದರಿಂದ ಜನ ಕೊಳ್ಳುವುದಿಲ್ಲ. ಹೀಗಾಗಿ ತಂದರೂ ನಮಗೆ ವೇಸ್ಟ್ ಆಗುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಈಗ ಬೀನ್ಸ್, ಟೊಮೆಟೊ ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಆದರೆ ತೆಂಗಿನಕಾಯಿ ಬೆಲೆ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ. ಅದೇ ರೀತಿ ಎಳೆನೀರಿನ ಪರಿಸ್ಥಿತಿಯೂ ಆಗಿದೆ. ಲೋಡ್ ಬರುವುದು ಅಪರೂಪವಾಗಿದೆ. ಹೀಗಾಗಿ ಎಳೆನೀರಿನ ಬೆಲೆ 65 ರೂ.ಗಳಿಂದ 70 ರೂ.ವರೆಗೆ ಬಂದು ತಲುಪಿದೆ. ಬೇಸಿಗೆ ಮುಗಿಯುವರೆಗೂ ಬಹುಶಃ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ