ಬೆಂಗಳೂರು: ರಾಜ್ಯದಲ್ಲಿ ಈಗ ಬಿಸಿಲಿನ ಝಳ ಹೆಚ್ಚಾಗಿದ್ದು, ಬೆಂಗಳೂರಿನಲ್ಲೂ ಬೇಸಿಗೆಕಾಲದ ಧಗೆ ಶುರುವಾಗಿದೆ. ತಾಪಮಾನ ಹೆಚ್ಚಳವಾಗುತ್ತಿದ್ದಂತೇ ಬೆಂಗಳೂರಿನಲ್ಲಿ ಎಳೆನೀರಿನ ಬೆಲೆಯೂ ಗಗನಕ್ಕೇರಿದೆ.
ಬೇಸಿಗೆಕಾಲದಲ್ಲಿ ಎಳೆನೀರು, ಕಲ್ಲಂಗಡಿ ಹಣ್ಣಿನಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು. ಬಾಡಿ ಹೀಟ್ ಆಗದಂತೆ ಎಳೆನೀರು ಸೇವನೆ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಈಗ ರಾಜ್ಯ ರಾಜಧಾನಿಯಲ್ಲಿ ಎಳೆ ನೀರು ಬೆಲೆ ಕೇಳುವಂತೆಯೇ ಇಲ್ಲ.
ಒಂದೆಡೆ ಕಾಯಿ ಬರುವುದು ಕಡಿಮೆಯಾಗಿದ್ದರೆ ಇನ್ನೊಂದೆಡೆ ಬೇಡಿಕೆಯೂ ಹೆಚ್ಚಾಗಿದೆ. ಪರಿಣಾಮ ಉತ್ತಮ ಗುಣಮಟ್ಟದ ಎಳೆನೀರಿನ ಬೆಲೆ 60-70 ರೂ.ಗೆ ತಲುಪಿದೆ. ಕೆಲವೇ ದಿನಗಳ ಹಿಂದೆ 45-50 ರೂ. ಇದ್ದ ಎಳೆನೀರು ಈಗ ಏಕಾಏಕಿ 15-20 ರೂ.ಗೆ ಏರಿಕೆಯಾಗಿದೆ.
ವ್ಯಾಪಾರ ಹೆಚ್ಚಾಗಿದೆ ಆದರೆ ಅದಕ್ಕೆ ತಕ್ಕಷ್ಟು ಕಾಯಿ ಬರುತ್ತಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಇತ್ತೀಚೆಗೆ ತೆಂಗಿನಕಾಯಿ ಬೆಲೆಯೂ ಹೆಚ್ಚಾಗಿದ್ದನ್ನು ನೀವು ಗಮನಿಸಿರಬಹುದು. ಗುಣಮಟ್ಟದ ತೆಂಗಿನ ಕಾಯಿ ಬರದೇ ಇರುವುದು ಇದಕ್ಕೆ ಕಾರಣವಾಗಿದೆ. ಇದೀಗ ಎಳೆನೀರಿನ ಬೆಲೆಯೂ ಗಗನಕ್ಕೇರಿದೆ.
ಕೆಲವೊಂದು ಕಡೆ ಸಾಧಾರಣ ಗುಣಮಟ್ಟದ ಕಡಿಮೆ ನೀರು ಇರುವ ಎಳೆನೀರು 35-40 ರೂ.ಗೆ ಮಾರಾಟವಾಗುತ್ತಿದೆ. ಆದರೆ ಇದರಲ್ಲಿ ಹೆಚ್ಚು ನೀರು ಇರಲ್ಲ. ಚೆನ್ನಾಗಿ ನೀರು ಇರುವ ಕಾಯಿ ಬೇಕೆಂದರೆ 60 ರೂ.ಗಿಂತ ಕಮ್ಮಿಯಿಲ್ಲ ಎನ್ನುವುದು ಗ್ರಾಹಕರ ಅಳಲು.