ಬೆಂಗಳೂರು: ಮಕ್ಕಳ ಸರಣಿ ಸಾವಿನ ನಂತರ ಸ್ರೆಸನ್ ಫಾರ್ಮಾಸ್ಟುಟಿಕಲ್ಸ್ ಕಂಪನಿ ತಯಾರಿಸುವ ಕೋಲ್ಡ್ರಿಫ್ ಸಿರಪ್ ಗೆ ಈಗ ಕರ್ನಾಟಕದಲ್ಲೂ ನಿಷೇಧ ಹೇರಲಾಗಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಘಟನೆಗಳು ವರದಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸಿರಪ್ ಮಾರಾಟ ಮಾಡದಂತೆ ಮತ್ತು ವೈದ್ಯರೂ ಚೀಟಿಯಲ್ಲಿ ಸೂಚಿಸದಂತೆ ಆದೇಶ ನೀಡಿತ್ತು.
ಇದರ ಬೆನ್ನಲ್ಲೇ ಈಗ ರಾಜ್ಯದಲ್ಲೂ ಈ ಸಿರಪ್ ಗೆ ನಿಷೇಧ ಹೇರಲಾಗಿದೆ. ಕೆಪಿಆರ್ ಡಿಪ ಸಂಸ್ಥೆ ತಕ್ಷಣವೇ ಈ ಔಷದಿಯನ್ನು ಎಲ್ಲಾ ಮಾರಾಟಗಾರರು ಮತ್ತು ವಿತರಕರು ಪೂರೈಸದಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ಇರುವ ಸ್ಟಾಕ್ ಗಳನ್ನೂ ಹಿಂಪಡೆಯುವಂತೆ ಸೂಚಿಸಲಾಗಿದೆ.
ನೆಗಡಿ, ಕೆಮ್ಮು ಇತ್ಯಾದಿ ಶೀತ ಸಂಬಂಧೀ ಕಾಯಿಲೆಗಳಿಗೆ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತಿತ್ತು. ಆದರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿಈ ಸಿರಪ್ ಸೇವಿಸಿ ಸುಮಾರು 11 ಮಕ್ಕಳು ಸಾವನ್ನಪ್ಪಿರುವ ವರದಿಯಾಗಿದೆ. ಹೀಗಾಗಿ ಈ ಸಿರಪ್ ನ್ನು ಈಗ ಪರೀಕ್ಷೆಗೊಳಪಡಿಸಲಾಗುತ್ತಿದ್ದು ಇದರ ವರದಿ ಬರುವವರೆಗೂ ಮಾರಾಟ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.