ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

Krishnaveni K

ಶನಿವಾರ, 4 ಅಕ್ಟೋಬರ್ 2025 (15:09 IST)
ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲೂ ಜಾತಿ ಸಮೀಕ್ಷೆ ಆರಂಭವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದ ಅಧಿಕಾರಿಗಳು ಇಂದು ಸಮೀಕ್ಷೆ ನಡೆಸಿದ್ದಾರೆ. ಆದರೆ ಸಮೀಕ್ಷೆ ವೇಳೆ ಕೇಳಿದ ಕೆಲವು ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಪ್ರಶ್ನೆ ತಯಾರಿಸಿದವರು  ಯಾರು ಎಂದು ಕಾಲೆಳೆದಿದ್ದಾರೆ.

ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಜಾತಿ ಸಮೀಕ್ಷೆ ನಡೆಸುತ್ತಿದೆ. ಇಂದು ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಈ ವೇಳೆ ಸಮೀಕ್ಷಕರ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ವೈಯಕ್ತಿಕ ಪ್ರಶ್ನೆ ಕೇಳಬಾರದು ಎಂದಿದ್ದಾರೆ.

ಆಸ್ತಿ ವಿವರ, ಶಿಕ್ಷಣ, ಮನೆ ಇತ್ಯಾದಿ ವಿವರಗಳನ್ನು ಆರಾಮವಾಗಿ ನೀಡಿದ ಡಿಕೆ ಶಿವಕುಮಾರ್ ಚಿನ್ನಾಭರಣದ ಬಗ್ಗೆ ಮಾಹಿತಿ ಕೇಳಿದಾಗ ಗರಂ ಆದರು. ತೀರಾ ವೈಯಕ್ತಿಕ ಪ್ರಶ್ನೆ ಕೇಳಬೇಡಿ. ಅದೆಲ್ಲಾ ಅಗತ್ಯವಿಲ್ಲ. ಇಷ್ಟು ಸುದೀರ್ಘವಾಗಿ ಪ್ರಶ್ನೆ ಮಾಡಿದರೆ ನಮಗೇ ಕಿರಿ ಕಿರಿಯಾಗುತ್ತದೆ. ಇನ್ನು, ಜನರು ಉತ್ತರ ಕೊಡುತ್ತಾರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಪ್ರಶ್ನೆ ತಯಾರಿಸಿದ್ದು ನಿಮ್ಮ ಸರ್ಕಾರಕ್ಕೆ ಗೊತ್ತಿಲ್ವಾ? ಈ 60 ಪ್ರಶ್ನೆಗಳು ಯಾವೆಲ್ಲಾ ಎಂದು ನಿಮ್ಮ ಗಮನಕ್ಕೆ ತಂದಿಲ್ವಾ? ನಿಮ್ಮದೇ ಸರ್ಕಾರ ಮಾಡಿರೋ ಪ್ರಶ್ನೆ ನಿಮಗೇ ಟೂ ಮಚ್ ಎನಿಸಿದರೆ ಜನ ಸಾಮಾನ್ಯರ ಗತಿಯೇನು ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ