ಕೆಂಪಯ್ಯ ವಿರುದ್ಧ IAS, IPS ಅಧಿಕಾರಿಗಳು ಸಿಡಿದೆದ್ದದ್ದು ಯಾಕೆ….?
ಮಂಗಳವಾರ, 12 ಸೆಪ್ಟಂಬರ್ 2017 (17:49 IST)
ಬೆಂಗಳೂರು: ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸಿಡಿದೆದ್ದಿದ್ದಾರೆ.
ರಾಜ್ಯದ ಖಡಕ್ ಐಎಎಸ್, ಐಪಿಎಸ್ ಅಧಿಕಾರಿಗಳು ಸಿಡಿದೆದ್ದಿದ್ದು, ಕೆಂಪಯ್ಯ ಹಗರಣಗಳ ಬಗ್ಗೆ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಮತ್ತು ಡಿಒಪಿಗೆ ರಹಸ್ಯವಾಗಿ ದೂರು ನೀಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಅಲ್ಲದೆ ಈ ಕುರಿತು ದಾಖಲೆ ಸಮೇತ ದೂರು ನೀಡಿದ್ದಾರೆ ಎನ್ನಲಾಗಿದೆ.
ಕೆಂಪಯ್ಯ ವಿರುದ್ಧ ದನಿ ಎತ್ತಿದವರಿಗೆ ಕಿರುಕುಳ ನೀಡುವುದರ ಜತೆಗೆ ಎತ್ತಂಗಡಿ ಶಿಕ್ಷೆ ನೀಡುತ್ತಿದ್ದರಂತೆ. ಕಳಂಕಿತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡಿ, ಪೊಲೀಸ್ ಇಲಾಖೆ ನಿಯಮ ಉಲ್ಲಂಘಿಸಿ ದಕ್ಷ ಅಧಿಕಾರಿಗಳನ್ನ ಎತ್ತಂಗಡಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಗಾರಾಮ್ ಬಡೇರಿಯಾ, ಎಂ.ಎನ್.ರೆಡ್ಡಿ ಎತ್ತಂಗಡಿಯಲ್ಲೂ ಕೆಂಪಯ್ಯ ಕೈವಾಡ ಇದೆ ಎಂದು ವಾಹಿನಿ ವರದಿ ಮಾಡಿದೆ.