ವೈಟ್ ಟಾಪಿಂಗ್ ಕಾಮಗಾರಿಯನ್ನು ನಿಗಧಿತ ಅವಧಿಗೆ ಮುನ್ನವೇ ಪೂರ್ಣ: ಮುಖ್ಯ ಆಯುಕ್ತರು

ಮಂಗಳವಾರ, 17 ಆಗಸ್ಟ್ 2021 (21:28 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್.ಆರ್.ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸದರಿ ರಸ್ತೆಯ ಬಲಭಾಗದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲುಸೇತುವೆ ಇಳಿಜಾರು(Down Ramp) ನಿಂದ ಎಸ್.ಜೆ.ಪಿ ರಸ್ತೆವರೆಗೆ ವೈಟ್‌ಟಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಉಲ್ಲೇಖಿತ ಪತ್ರದಂತೆ 15 ದಿನಗಳೊಳಗೆ ಪೂರ್ಣಗೊಳಿಸುವ ಷರತ್ತಿಗೊಳಪಟ್ಟು ಕಾಮಗಾರಿಗೆ ಅನುಮತಿ ಪಡೆಯಲಾಗಿರುತ್ತದೆ. 
 
 ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲುಸೇತುವೆ ಇಳಿಜಾರು(Down Ramp) ಹತ್ತಿರ ಮಳೆಯಾದಂತಹ ಸಂದರ್ಭದಲ್ಲಿ ಉಂಟಾಗುವ ವಾಟರ್ ಲಾಗಿಂಗ್ ಸಮಸ್ಯೆಯನ್ನು ನಿವಾರಿಸುವ ಸಂಬಂಧ, ಈ ರಸ್ತೆ ಭಾಗದಲ್ಲಿ ವೈಟ್‌ಟಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಯನ್ನು ದಿನಾಂಕ:06.08.2021 ರಂದು ಜಂಟಿ ಪೊಲೀಸ್ ಆಯುಕ್ತರು(ಸಂಚಾರ) ರವರು ಮುಖ್ಯ ಇಂಜಿನಿಯರ್(ಯೋಜನೆ ಕೇಂದ್ರ) ರವರೊಂದಿಗೆ ಚರ್ಚಿಸಿದಂತೆ, 15 ದಿನದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಲಾಗಿತ್ತು.  
 
ಅದರಂತೆ, ವೈಟ್ ಟಾಪಿಂಗ್ ಹಾಗೂ ಅಡ್ಡಮೋರಿ ಕಾಮಗಾರಿಯನ್ನು ದಿನಾಂಕ: 07.08.2021 ರಂದು ಪ್ರಾರಂಭಿಸಿ ಪ್ರಥಮ ಹಂತದಲ್ಲಿ ಮೇಲುಸೇತುವೆ ಹತ್ತಿರವಿರುವ ಅಡ್ಡಮೋರಿಯನ್ನು ಮಾತ್ರ ಅಭಿವೃದ್ಧಿ ಪಡಿಸಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ ಕಾಮಗಾರಿ ಪ್ರಗತಿಯ ಸಂದರ್ಭದಲ್ಲಿ ಎಸ್.ಜೆ.ಪಿ ರಸ್ತೆ ಜಂಕ್ಷನ್ ಹತ್ತಿರ ರಸ್ತೆಗೆ ಅಡ್ಡಲಾಗಿ ಮತ್ತೊಂದು ಮಳೆನೀರುಗಾಲುವೆ ಹಾದು ಹೋಗಿರುವುದು ಕಂಡು ಬಂದಿದ್ದರಿಂದ ಸದರಿ ಮಳೆನೀರುಗಾಲುವೆಯನ್ನೂ ಸಹ ಅಭಿವೃದ್ಧಿ ಪಡಿಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಿ ದಿನಾಂಕ:17.08.2021ರಂದು(ಇಂದು) ಮಧ್ಯಾಹ್ನ 3:00 ಗಂಟೆಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ. 
 
ವೈಟ್ ಟಾಪಿಂಗ್ ಹಾಗೂ ಅಡ್ಡಮೋರಿ ಕಾಮಗಾರಿಯನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ನೀಡಿದ ಆಶ್ವಾಸನೆಯಂತೆ 10 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿರುತ್ತದೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಹಕರಿಸಿದ ಸಾರ್ವಜನಿಕರಿಗೆ, ಸಂಚಾರಿ ಪೊಲೀಸ್ ಇಲಾಖೆಯವರಿಗೆ ಪಾಲಿಕೆ ವತಿಯಿಂದ  ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ವಂದನೆಗಳನ್ನು ತಿಳಿಸಿರುತ್ತಾರೆ.
white toping

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ