ನಾಳಿನ ರಾಜ್ಯ ಬಂದ್ ಕರೆ ಹಿಂಪಡೆಯಲು ಕಾಂಗ್ರೆಸ್ ನಿರ್ಧಾರ

ಬುಧವಾರ, 8 ಮಾರ್ಚ್ 2023 (15:56 IST)
ದ್ವಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ರಾಜ್ಯಾದ್ಯಂತ ಶಾಲಾ- ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್ ಅನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
 
ಕಾಂಗ್ರೆಸ್ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
‘ಬಿಜೆಪಿ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮಾ.9 ರ ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ಎರಡು ಗಂಟೆಗಳ ಕಾಲ ಸಾಂಕೇತಿಕ ಬಂದ್ ಮಾಡಲು ಕಾಂಗ್ರೆಸ್ ನಿರ್ಧರಿಸಿತ್ತು.
 
ಆದರೆ ಪರೀಕ್ಷೆಗಳು ಇರುವ ಕಾರಣ ಬಂದ್ ನಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರ ಹಿತ ನಮ್ಮ ಆದ್ಯತೆ. ಹೀಗಾಗಿ ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಬಂದ್ ಕರೆ ವಾಪಸ್ ಪಡೆಯಲು ತೀರ್ಮಾನಿಸಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ