ಜಯಮಾಲಾ ಹೇಳಿಕೆಗೆ ತಿರುಗೇಟು ನೀಡಿದ ಕೈ ಮುಖಂಡರು!

ಮಂಗಳವಾರ, 6 ನವೆಂಬರ್ 2018 (13:54 IST)
ಸಚಿವ ಹೆಚ್.ಡಿ.ರೇವಣ್ಣ ಸಾಯುವತನಕ ಶಾಸಕ ಎಂದು ಹಾಡಿ ಹೊಗಳಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಹೇಳಿಕೆಗೆ ಸ್ವಪಕ್ಷದವರಿಂದಲೇ ಟೀಕೆಗಳು ಕೇಳಿಬರುತ್ತಿವೆ.

ಶ್ರವಣಬೆಳಗೊಳದಲ್ಲಿ ನಡೆದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ರಾಷ್ಟ್ರೀಯ ಮಹಾವೀರ ಶಾಂತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವೆ ಜಯಮಾಲಾ, ಹಾಸನ ಜಿಲ್ಲೆಯ ಶುಚಿತ್ವ ನೋಡಿದರೆ ಸಚಿವ ರೇವಣ್ಣ ಅವರ ಕೆಲಸ ಗೊತ್ತಾಗುತ್ತದೆ. ಅವರು ಸಾಯುವತನಕ ಶಾಸಕರಾಗಿ ಇರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅದು ಸ್ವಪಕ್ಷದವರಿಂದಲೇ ವಿವಾದಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎ. ಮಂಜು ಮಾತನಾಡಿದ್ದು, ಅನುಭವವಿಲ್ಲದವರಿಗೆ ಅಧಿಕಾರ ಸಿಕ್ಕರೆ ಹೀಗೆ ಆಗುತ್ತದೆ. ಓಲೈಕೆ ಮಾಡುವುದಕ್ಕಾಗಿ ಜಯಮಾಲಾ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಸಾಯುವ ತನಕ ನಟಿಯಾಗುತ್ತೇನೆ ಎಂದು ಜಯಮಾಲಾ ಅಂದುಕೊಂಡಿದ್ದರು. ಆದರೆ ಜನರು ಅವರ ಸಿನಿಮಾ ನೋಡುವುದಿಲ್ಲ ಎಂಬ ಸತ್ಯ ಅರಿವಾದಾಗ ರಾಜಕೀಯಕ್ಕೆ ಬಂದಿದ್ದಾರೆ. ಸಿನಿಮಾದಲ್ಲಿ ದುಡ್ಡು ಮಾಡಿರುವ ಅವರು, ರಾಜಕೀಯದಲ್ಲಿ ಓಲೈಕೆಯ ರಾಜಕಾರಣ ಮಾಡುತ್ತಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ