ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಗೆ ಜೈಲೇ ಗತಿ

Rajesh patil

ಬುಧವಾರ, 21 ಫೆಬ್ರವರಿ 2018 (17:49 IST)
ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಸಂಗಡಿಗರಿಗೆ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನಲಪಾಡ್ ಹಾಗೂ 9 ಮಂದಿ ಸಹಚರರನ್ನು 8 ನೇ ಎಂಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದಾರೆ.
 
ಇದರಿಂದಾಗಿ ಇಂದೇ ಜಾಮೀನು ಪಡೆದು ಹೊರಬರುವ ನಲಪಾಡ್ ಮತ್ತು ಗ್ಯಾಂಗ್ ನಿರೀಕ್ಷೆ ಹುಸಿಯಾಗಿದೆ.
 
ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಮೇಲೆ ಅಷ್ಟಕ್ಕೇ ಸುಮ್ಮನಾಗದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಆಸ್ಪತ್ರೆಗೂ ಬಂದು ಗಲಾಟೆ ಮಾಡಿದ್ದರು ಎಂದು ವಿದ್ವತ್ ಸಹೋದರ ಖಾಸಗಿ ವಾಹಿನಿಗೆ ಹೇಳಿದ್ದಾರೆ.
 
2 ಕಾರುಗಳಲ್ಲಿ ವಿದ್ವತ್ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ಬಂದ  ನಲಪಾಡ್ ಮತ್ತು ಗ್ಯಾಂಗ್ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಇದ್ದ ಕೊಠಡಿಗೆ ನುಗ್ಗಿದ್ದರು. ಅಷ್ಟೇ ಅಲ್ಲ, ಅಲ್ಲಿಯೂ ವಿದ್ವತ್ ಮೇಲೆ ಹಲ್ಲೆ ನಡೆಸಲು ಮಂದಾಗಿದ್ದ.
 
ಈ ಸಂದರ್ಭದಲ್ಲಿ ತಡೆಯಲು ಹೋದ ತನ್ನ ಕೊರಳ ಪಟ್ಟಿ ಹಿಡಿದು ಬೆದರಿಸಿದ ಎಂದು ಸಹೋದರ ಸಾತ್ವಿಕ್ ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ರಾಘವೇಂದ್ರ ರಾಜ್ ಕುಮಾರ್ ಪುತ್ರ ಗುರು ರಾಜ್ ಕುಮಾರ್ ನೋಡಿ ಸುಮ್ಮನಾದ ನಲಪಾಡ್ ಅಲ್ಲಿಂದ ತೆರಳಿದ್ದ. ಒಂದು ವೇಳೆ ಗುರು ಇಲ್ಲದೇ ಹೋಗಿದ್ದರೆ ನನ್ನ ತಮ್ಮನನ್ನು ಕೊಂದೇ ಬಿಡುತ್ತಿದ್ದರು ಎಂದು ಸಾತ್ವಿಕ್ ಮಾಧ್ಯಮದ ಮುಂದೆ ಹೇಳಿದ್ದಾರೆ.
 
ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ನಡೆಸಿದ್ದು ಹೇಗೆ? ವಿದ್ವತ್ ಬಾಯ್ಬಿಟ್ಟ ವೃತ್ತಾಂತ!
 
ಖಾಸಗಿ ರೆಸ್ಟೋರೆಂಟ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿಂದ ಕ್ಷಲ್ಲುಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವಿದ್ವತ್ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
 
ಕಾಲು ಮುರಿದಿದ್ದರಿಂದ ಕಾಲು ಚಾಚಿ ಊಟಕ್ಕೆ ಕೂತಿದ್ದೆ. ಆಗ ಅಲ್ಲಿಗೆ ಬಂದ ಮೊಹಮ್ಮದ್ ಗೆ ನನ್ನ ಕಾಲು ತಾಗಿತ್ತು. ಇದಕ್ಕೆ ಸಾರಿ ಕೇಳುವಂತೆ ಆತ ಒತ್ತಾಯಿಸಿದ. ಆದರೆ ನಾನು ಕೇಳಲಿಲ್ಲ ಎಂದಾಗ ಹ್ಯಾರಿಸ್ ಮಗ ಎಂದು ಗೊತ್ತಿದ್ದೂ ಈ ರೀತಿ ಮಾತನಾಡುತ್ತಿದ್ದೀಯಾ ಎಂದು ಅಬ್ಬರಿಸಿದನಲ್ಲದೆ, ಏಕಾಏಕಿ ಬಿಯರ್ ಬಾಟಲಿಯಿಂದ ಮುಖಕ್ಕೆ ಗುದ್ದಿದ.
 
ಅಲ್ಲದೆ, ಅಲ್ಲಿದ್ದ ಕುರ್ಚಿ ಎಸೆದ. ಏಕಾ ಏಕಿ ತನ್ನ ಬೌನ್ಸರ್ ಗಳಿಂದ ಹಲ್ಲೆ ಮಾಡಿಸಿದ. ಆಗ ನಾನು ಸಾರಿ ಸಾರಿ ಎಂದು ಹೇಳಿದರೂ ಕೇಳದೇ ಮಾರಣಾಂತಿಕವಾಗಿ ಹೊಡೆದ ಎಂದು ವಿದ್ವತ್ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ