ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತ ಮೇಲಿನ ಚರ್ಚೆ ಆರಂಭವಾಗಿದ್ದು, ಈ ವೇಳೆ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಸಿದ್ದರಾಮಯ್ಯ ಕ್ರಿಯಾಲೋಪದ ಬಗ್ಗೆ ಪ್ರಸ್ತಾಪ ಮಾಡಿದಾಗ ಮಾಜಿ ಸ್ಪೀಕರ್ ಕೂಡಾ ಆಗಿರುವ ಬಿಜೆಪಿ ಶಾಸಕ ಕೆಜಿ ಬೋಪಯ್ಯ ಆಕ್ಷೇಪವೆತ್ತಿದರು. ಈ ವೇಳೆ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ನೀವು ಸ್ಪೀಕರ್ ಆಗಿದ್ದಾಗ ಕೈಗೊಂಡ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ನಿಮ್ಮ ತಪ್ಪಿನ ಫಲವೇನು ಎಂಬುದಕ್ಕೆ ಸಾಕ್ಷಿಯಾಗಿ ಅಂದು ಬೀದಿಪಾಲಾದ ವೆಂಕಟರಮಣಪ್ಪ ಇದ್ದಾರೆ ಎಂದರು.
ಈ ವೇಳೆ ವೆಂಕಟರಮಣಪ್ಪ ಕೂಡಾ ಬೋಪಯ್ಯ ವಿರುದ್ಧ ಹರಿಹಾಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವಿನ ಗದ್ದಲವನ್ನು ತಣ್ಣಗಾಗಿಸಲು ಸ್ಪೀಕರ್ ಮಧ್ಯಪ್ರವೇಶಿಸಬೇಕಾಯಿತು.