ಪಾದಯಾತ್ರೆಗೆ ಕಾಂಗ್ರೆಸ್ ಸಜ್ಜು

ಶನಿವಾರ, 5 ಫೆಬ್ರವರಿ 2022 (16:30 IST)
ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಮುಖಂಡರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ವಿಷಯ ಇಟ್ಟುಕೊಂಡು ಪಾದಯಾತ್ರೆ ಮಾಡಬಹುದೆಂಬ ಆಸೆ ಅನೇಕ ಮುಖಂಡರಲ್ಲಿ ಹುಟ್ಟಿಕೊಂಡಿದೆ.
ಪಾದಯಾತ್ರೆ ಆಯೋಜನೆ ಅಷ್ಟು ಸಲೀಸಲ್ಲ ಮತ್ತು ಪ್ರಮುಖ ನಾಯಕರು ಬಾರದೇ ಆ ಪ್ರಯತ್ನಕ್ಕೆ ಅಷ್ಟು ಫಲ ಸಿಗುವುದಿಲ್ಲ ಎಂಬ ಅರಿವಿದ್ದರೂ ಪಾದಯಾತ್ರೆ ಕುರಿತು ಚರ್ಚೆ ನಡೆಸಿರುವ ಕುತೂಹಲದ ಬೆಳವಣಿಗೆ ನಡೆದಿದೆ.
 
ಕಾಂಗ್ರೆಸ್ ಪಾದಯಾತ್ರೆಗೆ ಇತಿಹಾಸ ಸಾಕಷ್ಟಿವೆ. ಇತ್ತೀಚಿನ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ್ದು ಬಳ್ಳಾರಿ ಕಡೆಗಿನ 300 ಕಿಲೋಮೀಟರ್ ಪಾದಯಾತ್ರೆ. ಬಳಿಕ ನಡೆದ ಹೊಸಪೇಟೆಯಿಂದ ಕೂಡಲ ಸಂಗಮದ ವರೆಗೆ 126 ಕಿಮೀ ಪಾದಯಾತ್ರೆ, ಇತ್ತೀಚೆಗೆ ಅರ್ಧಕ್ಕೆ ಮೊಟಕಾದ ಮೇಕೆದಾಟು ಪಾದಯಾತ್ರೆ. ಬಳ್ಳಾರಿ ಪಾದಯಾತ್ರೆ ಅಧಿಕಾರದ ಫಸಲು ತಂದುಕೊಟ್ಟಿತ್ತು. ಕೃಷ್ಣೆಯ ಕಡೆಗಿನ ನಡೆಗೆ ನಿರೀಕ್ಷಿತ ಲಾಭ ತಂದುಕೊಡಲಿಲ್ಲ. ಆದರೆ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ಮೊಟಕಾದರೂ ದೊಡ್ಡ ಸದ್ದು ಮಾಡಿದೆ. ಪಕ್ಷದ ನಾಯಕರು ಒಟ್ಟಾಗಿ ಸೇರಿದರು, ಸಣ್ಣಪುಟ್ಟ ಮುಖಂಡರನ್ನು ಒಟ್ಟು ಮಾಡಿತು, ರಾಜ್ಯದ ಜನರ ಗಮನ ಸೆಳೆಯಿತು, ಹೈಕಮಾಂಡ್ ಕೂಡ ಆಸಕ್ತಿ ವಹಿಸಿತ್ತು. ಇದೇ ಕಾರಣಕ್ಕೆ ತಮ್ಮ ಭಾಗದಲ್ಲಿ ರಾಜಕೀಯವಾಗಿ ಶಕ್ತಿವಂತರಾಗಲು ಪಾದಯಾತ್ರೆ ಮಾಡಬೇಕೆಂದು ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವ ಕೆಲವು ನಾಯಕರು ಚರ್ಚೆ ನಡೆಸಿದ್ದಾರೆ.
 
ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಬೇಕಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಉತ್ಸುಕರಾಗಿದ್ದಾರೆ. ರಾಮನಗರದಿಂದ ಬೆಂಗಳೂರಿನ 18-20 ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವಂತೆ ಪಾದಯಾತ್ರೆ ರೂಪುರೇಷೆ ಬದಲಿಸುವ ಬಗ್ಗೆಯೂ ಚರ್ಚೆ ನಡೆದಿದೆ.
 
ಅದೇ ರೀತಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೆಲವು ತೀರ್ಮಾನ ಕೈಗೊಂಡು ಆಡಳಿತ ಪಕ್ಷ ಚುನಾವಣೆ ವೇಳೆ ರಾಜಕೀಯ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾವು ಪಾದಯಾತ್ರೆ ಮಾಡಿದರೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ಅದರ ಕ್ರೆಡಿಟ್ ನಮ್ಮ ಪಕ್ಷ ಪಡೆಯಬಹುದು. ಹೀಗಾಗಿ ಪಾದಯಾತ್ರೆಯೋ ಅಥವಾ ದೊಡ್ಡ ಮಟ್ಟದ ಹೋರಾಟವೋ ಯಾವುದಾದರೊಂದು ತುರ್ತು ಅಗತ್ಯ ಇದೆ ಎಂದು ಕೃಷ್ಣ ನದಿ ತೀರದ ಶಾಸಕರು ತಮ್ಮ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ