ಬೆಂಗಳೂರು: ದಿನೇ ದಿನೇ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆಯಾಗಿದ್ದು ಬೆಲೆ ಕೇಳಿದ್ರೆ ಫ್ರೈ ಆಗಿ ಹೋಗ್ತೀರಿ.
ಪ್ರತಿನಿತ್ಯದ ಬಳಕೆ ವಸ್ತುಗಳಲ್ಲಿ ಅಡುಗೆ ಎಣ್ಣೆ ಮುಖ್ಯವಾದುದು. ಇದೀಗ ಅಡುಗೆ ಎಣ್ಣೆ ದರ ಏಕಾಏಕಿ 10-20 ರೂ.ಗಳಷ್ಟು ಏರಿಕೆಯಾಗಿದೆ. ಕೇವಲ ಸೂರ್ಯಕಾಂತಿ ಎಣ್ಣೆಯ ದರ ಮಾತ್ರವಲ್ಲ ಕೊಬ್ಬರಿ ಎಣ್ಣೆಯ ದರವೂ ಏರಿಕೆಯಾಗಿದೆ.
ಸನ್ ಫ್ಲವರ್ ಆಯಿಲ್, ಪಾಮ್ ಆಯಿಲ್, ಕಡಲೆ ಎಣ್ಣೆ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಎಲ್ಲರದಲ್ಲೂ 10-20 ರೂ.ಗಳಷ್ಟು ಏರಿಕೆಯಾಗಿದೆ. ಅದರಲ್ಲೂ ಕೊಬ್ಬರಿ ಎಣ್ಣೆ ಬೆಲೆ 300 ರೂ.ಗಳ ಗಡಿ ದಾಟಿದೆ.
ಬೇಸಿಗೆ ಬರುತ್ತಿದ್ದಂತೇ ಎಳೆ ನೀರಿಗೆ ಬೇಡಿಕೆ ಜಾಸ್ತಿಯಾಗಿದ್ದು, ಉತ್ತಮ ಗುಣಮಟ್ಟದ ಕೊಬ್ಬರಿ ಬರುತ್ತಿಲ್ಲ. ಹೀಗಾಗಿ ಕೊಬ್ಬರಿ ಬೆಲೆ ಹೆಚ್ಚಾಗಿದೆ. ಸಹಜವಾಗಿಯೇ ತೆಂಗಿನ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಈಗಿನ ದರ ಕೇಳಿದರೆ ಮಧ್ಯಮ ವರ್ಗದ ಜನ ಶಾಕ್ ಆಗುತ್ತಿದ್ದಾರೆ.