ಕೊರೊನಾ ಸೋಂಕು ನಿಗ್ರಹ: ಸರ್ಕಾರಿ ನೌಕರರಿಂದ ಒಂದು ದಿನದ ವೇತನ ದೇಣಿಗೆ
ಗುರುವಾರ, 26 ಮಾರ್ಚ್ 2020 (19:05 IST)
ಮಹಾಮಾರಿ ಕೊರೋನಾ ಸೋಂಕು ನಿಗ್ರಹಕ್ಕೆ ಮತ್ತು ಸೋಂಕಿನಿಂದ ರಾಜ್ಯದ ಜನತೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆ ರೂಪದಲ್ಲಿ ನೀಡುವುದಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಇದಕ್ಕೆ ಕಲಬುರಗಿ ಜಿಲ್ಲಾ ಶಾಖೆಯು ಬೆಂಬಲ ಸೂಚಿಸಿದೆ ಎಂದು ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.
ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿ ರಾಜ್ಯ ಸರ್ಕಾರ, ವಿಶೇಷವಾಗಿ ಆರೋಗ್ಯ, ವೈದ್ಯಕೀಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಗಳು ಹಗಲು-ರಾತ್ರಿ ಎನ್ನದೇ ಕೊರೋನಾ ಪೀಡಿತರಿಗೆ ಚಿಕಿತ್ಸೆ, ಅರಿವು ಮೂಡಿಸುವ ಮತ್ತು ಕೊರೋನಾ ಹರಡದಂತೆ ಮುಂಜಾಗ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ದೇಣಿಗೆಯಿಂದ ಸಂಗ್ರಹಣೆಯಾದ ಮೊತ್ತವನ್ನು ಕೊರೋನಾ ಸೋಂಕು ಪೀಡಿತರ ಚಿಕಿತ್ಸೆಗೆ, ಚಿಕಿತ್ಸೆ ಕಾರ್ಯದಲ್ಲಿ ನಿರತ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷಾ ಪರಿಕರ ಖರೀದಿಸಲು ಹಾಗೂ ವೈರಾಣು ಹರಡದಂತೆ 24 ಗಂಟೆಗಳ ಕಾಲ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿಶೇಷವಾಗಿ ಆರೋಗ್ಯ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ವೇತನ-ಗೌರವಧನ ನೀಡಲು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಿ.ಎಸ್.ಷಡಾಕ್ಷರಿ ಅವರು ಕೋರಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ ಅಂದಾಜು 200 ಕೋಟಿ ರೂ. ಆಗಲಿದೆ ಎಂದು ರಾಜು ಲೇಂಗಟಿ ತಿಳಿಸಿದ್ದಾರೆ.