ಕೊರೊನಾ ಭೀತಿ : ಬೆಂಗಳೂರು, ಹೊರರಾಜ್ಯಗಳಿಗೆ ಖಾಸಗಿ ಬಸ್ ಸಂಚಾರ ಸ್ಥಗಿತ

ಬುಧವಾರ, 18 ಮಾರ್ಚ್ 2020 (19:16 IST)
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಮುಂದಾಗಿದ್ದಾರೆ.

ಕಲಬುರಗಿಯಿಂದ ಹೊರಹೋಗುವ ಮತ್ತು ಒಳಬರುವ ಎಲ್ಲಾ ಖಾಸಗಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಖಾಸಗಿ ಟ್ರಾವೆಲರ್ಸ್ ಮತ್ತು ಬುಕ್ಕಿಂಗ್ ಏಜೆಂಟರ ಸಭೆಯಲ್ಲಿ  ಅವರು ಕಟ್ಟಪ್ಪಣೆ ಮಾಡಿದರು.

ರಾಜ್ಯದ ರಾಜಧಾನಿ ಬೆಂಗಳೂರು, ಇತರೆ ಜಿಲ್ಲೆಗಳು, ನೆರೆರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಿಗೆ ತೆರಳುವ ಮತ್ತು ಜಿಲ್ಲೆಯೊಳಗೆ ಬರುವ ಬಸ್‍ಗಳ ಸಂಚಾರ ನಿಲ್ಲಿಸಬೇಕು. ಈಗಾಗಲೇ ಬುಕ್ಕಿಂಗ್ ಮಾಡಿರುವ ಸೀಟುಗಳ ಟಿಕೆಟ್ ಗಳನ್ನು ರದ್ದುಮಾಡುವಂತೆ ಬಸ್ ಮಾಲೀಕರು ಮತ್ತು ಏಜಂಟರಿಗೆ ಸೂಚನೆ ನೀಡಿದರು. ಮುಂದಿನ ಆದೇಶದವರೆಗೆ ಇದನ್ನು ಪಾಲಿಸಬೇಕೆಂದು ಅವರು ತಿಳಿಸಿದರು.

ಒಂದುವೇಳೆ, ಈ ಸೂಚನೆಯನ್ನು ಮೀರಿ ಬಸ್‍ಗಳ ಓಡಾಟ ನಡೆಸಿದಲ್ಲಿ, ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ 17 ಚೆಕ್ ಪೋಸ್ಟ್ ತೆರೆದಿದ್ದು, ಬಸ್ ಗಳ ಸಂಚಾರದ ಮೇಲೆ ನಿಗಾವಹಿಸಲಾಗುತ್ತದೆ ಎಂದರು.

ಇತ್ತೀಚೆಗೆ ಕೆಲವರು ಮುಂಬೈ, ಪುಣೆ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು, ಬಸ್‍ಗಳ ಮೂಲಕ ಕಲಬುರಗಿ ಜಿಲ್ಲೆಗೆ ಬಂದಿರುತ್ತಾರೆ. ಹಾಗಾಗಿ ಇದುವರೆಗೆ ಕಲಬುರಗಿ ನಗರ ಮತ್ತು ಜಿಲ್ಲೆಗೆ ಬಂದಿರುವ ಪ್ರಯಾಣಿಕರ ಸಂಪೂರ್ಣ ವಿವರ ನೀಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಏಜೆಂಟರಿಗೆ ಸೂಚಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ