ಸರಕಾರಿ ಅಧಿಕಾರಿಗೆ ಚಪ್ಪಲಿ ತೋರಿಸಿ ಹಲ್ಲೆಗೆ ಯತ್ನ ನಡೆಸಿರುವ ಕಾರ್ಪೋರೇಟರ್ ಬಂಧನ ಮಾಡಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ.
ಇತ್ತೀಚೆಗೆ ಶಿವಮೊಗ್ಗದ ಆರ್.ಟಿ.ಓ. ಕಚೇರಿಯಲ್ಲಿ ದಲಿತ ಅಧಿಕಾರಿಗಳಿಗೆ ಚಪ್ಪಲಿ ತೋರಿಸಿ ಹಲ್ಲೆಗೆ ಯತ್ನಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪಾಲಿಕೆಯ ಬಿಜೆಪಿ ಕಾರ್ಪೋರೇಟರ್ ವಿಶ್ವಾಸ್ ಹಾಗೂ ಮಧ್ಯವರ್ತಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ. ಇವರ ವಿರುದ್ಧ ರೌಡಿಶೀಟ್ ತೆರೆಯಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಈ ಘಟನೆಯಿಂದ ಆತಂಕಗೊಂಡಿರುವ ಆರ್.ಟಿ.ಓ. ಕಚೇರಿ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕೆಂದರು. ಕಾರ್ಪೋರೇಟರ್ ಆಗಿರುವ ವಿಶ್ವಾಸ್ ಹಾಗೂ ಆರ್.ಟಿ.ಓ. ಕಚೇರಿ ಏಜೆಂಟ್ ಗಳಾಗಿದ್ದ ಕೆಲವರು, ಎ.ಆರ್.ಟಿ.ಓ. ಆಗಿದ್ದ ಶ್ರೀನಿವಾಸ್ ಎಂಬುವವರಿಗೆ ಚಪ್ಪಲಿ ತೋರಿಸಿ ಬೆದರಿಸಿದ್ದು, ಇದು ಜಾತಿ ನಿಂದನೆಯಾಗಿದೆ. ಈ ಘಟನೆ ನಂತರ ಕಾಣದ ಕೈಗಳ ಕೈವಾಡದಿಂದ ಶ್ರೀನಿವಾಸಯ್ಯರನ್ನು ವರ್ಗಾವಣೆ ಮಾಡಿಸಲಾಗಿದೆ ಎಂದು ದೂರಿದರು.