ಹುಬ್ಬಳ್ಳಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಮದುವೆಯ ಎಲ್ಲಾ ಖರ್ಚು-ವೆಚ್ಚದ ದಾಖಲೆಗಳನ್ನು ಸರಕಾರಕ್ಕೆ ನೀಡಲಾಗುವುದು ಎಂದು ಸಂಸದ ಶ್ರೀರಾಮುಲು ತಿಳಿಸಿದ್ದಾರೆ.
ಶನಿವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಇನ್ನಿತರರು ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಅವರ ವಿವಾಹದ ದುಂದು ವೆಚ್ಚದ ಕುರಿತು ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಯಾರೊಬ್ಬರ ಮದುವೆ ಹಾಗೂ ಅವರ ಸಂಪ್ರದಾಯದ ಕುರಿತು ಪ್ರಶ್ನೆ ಮಾಡುವುದು ಸಮಂಜಸವಲ್ಲ. ಎಲ್ಲರ ವಿವಾಹದಂತೆ ಬ್ರಹ್ಮಿಣಿಯ ವಿವಾಹವೂ ನಡೆಯಲಿದೆ. ಅಲ್ಲದೆ, ಮದುವೆಗೆ ಸಂಬಂಧಿಸಿದ ಎಲ್ಲ ಖರ್ಚು-ವೆಚ್ಚಗಳನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತಂದೆಯಾದವನು ತನ್ನ ಮಕ್ಕಳ ಮದುವೆಯನ್ನು ಎಲ್ಲರ ಮದುವೆಗಿಂದ ಚೆನ್ನಾಗಿ ಮಾಡಬೇಕು ಎಂದು ಆಶಿಸುತ್ತಾನೆ. ಅದರಂತೆ ರೆಡ್ಡಿಯವರು ಬ್ರಾಹ್ಮಿಣಿ ಮದುವೆಯನ್ನು ವಿಶಿಷ್ಟವಾಗಿ ಮಾಡಲು ನಿರ್ಧರಿಸಿದ್ದಾರೆ. ಕೌಟುಂಬಿಕ ವಿಷಯವನ್ನು ರಾಜಕರಣಗೊಳಿಸುವುದು ಸರಿಯಲ್ಲ. ಇದು ಅವಳ ಮದುವೆ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.