ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ತಡೆಯಾಜ್ಞೆ

ಶನಿವಾರ, 18 ಡಿಸೆಂಬರ್ 2021 (14:16 IST)
ಮುತ್ತಪ್ಪ ರೈ ಆಸ್ತಿ ಹಕ್ಕಿನ ವಿಚಾರವಾಗಿ ಎರಡನೇ ಪತ್ನಿ ಅನುರಾಧಾ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ ಕೆಲ ನಿರ್ದಿಷ್ಟ ಆಸ್ತಿಗಳ ಮಾರಾಟಕ್ಕೆ ಮಧ್ಯಂತರ ತಡೆ ನೀಡಿದೆ ಆಸ್ತಿ ವಿವಾದ ಸಂಬಂಧ ಸಿವಿಲ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಅನುರಾಧಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌ ಮುದಗಲ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಿಸಿರುವ ನಿರ್ದಿಷ್ಟ ಆಸ್ತಿಗಳನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡದಂತೆ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.ಮುತ್ತಪ್ಪ ರೈ ಎರಡನೇ ಪತ್ನಿ ಆಗಿರುವ ಅನುರಾಧ ಪತಿಯ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೋರಿ ಸಿವಿಲ್‌ ಕೋರ್ಟ್‌ ನಲ್ಲಿ ದಾವೆ ಹೂಡಿದ್ದರು. ಈ ನಡುವೆ ಮುತ್ತಪ್ಪ ರೈ ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಕೆಲ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ಸಿವಿಲ್‌ ಕೋರ್ಟ್‌ ಇತ್ತೀಚೆಗೆ ತೆರವು ಮಾಡಿತ್ತು. ಅದನ್ನು ಪ್ರಶ್ನಿಸಿ, ಅನುರಾಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
 
ಏನಿದು ಪ್ರಕರಣ?
ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಮುತ್ತಪ್ಪ ರೈ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
 
ಈಗಾಗಲೇ ಅನುರಾಧ ಅವರಿಗೂ ಆಸ್ತಿಯಲ್ಲಿ ಪಾಲು ನೀಡಲಾಗಿದೆ ಎಂದು ರೈ ವಿಲ್‍ನಲ್ಲಿ ತಿಳಿಸಿದ್ದರು. ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ