ಸ್ವಿಗ್ಗಿ ಮತ್ತು ಡುಂಜೋ ಸೇವೆ ನೀಡುವವರಂತೆ ಆ ಸಮವಸ್ತ್ರ ಧರಿಸಿಕೊಂಡು ಮಾದಕ ದ್ರವ್ಯಗಳ ಕಳ್ಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಮೂಲತಃ ಕೊಡಗು ಜಿಲ್ಲೆಯ ಅಬ್ದುಲ್ ರಜಾಕ್ ಮತ್ತು ಎಸ್.ಎಚ್. ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಲಿಸಿದ ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
"ತನಿಖೆ ವೇಳೆ ಆರೋಪಿಗಳಿಂದ ಮಾದಕ ನಿಗ್ರಹ ದಳ(ಎನ್ ಸಿಬಿ) ಸಾಕಷ್ಟು ಎಟಿಎಂ ಕಾರ್ಡ್ ಗಳನ್ನು ಮತ್ತು ಹಣ ಠೇವಣಿ ಮಾಡುವ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಡಂಜೋ ಮತ್ತು ಸ್ವಿಗ್ಗಿ ಸೇವಾ ಪೂರೈಕೆದಾರರ ಹೆಸರಿನಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಿದ್ದಾರೆ. ಈ ಹಂತದಲ್ಲಿ ಎನ್‌ಸಿಬಿ ತಮ್ಮಿಂದ ಏನೂ ವಶಪಡಿಸಿಕೊಂಡಿಲ್ಲವೆಂಬ ಆರೋಪಿಗಳ ಹೇಳಿಕೆ ಆಧರಿಸಿ ಜಾಮೀನು ನೀಡಲಾಗದು'' ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಅರ್ಜಿದಾರರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ತಳ್ಳಿ ಹಾಕಲಾಗದು. ಡ್ರಗ್ ಪೆಡ್ಲಿಂಗ್ ಚಟುವಟಿಕೆ ಗಂಭೀರ ಅಪರಾಧವಾಗಿದ್ದು, ಅವುಗಳಲ್ಲಿ ತೊಡಗಿರುವವರ ಜಾಮೀನು ಅರ್ಜಿ ಪುರಸ್ಕರಿಸಲಾಗದು ಎಂದು ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿದೆ.