ಅಗತ್ಯ ಸೇವಾ ಸಿಬ್ಬಂದಿ ಹೆಸರಿನಲ್ಲಿ ಅಪರಾಧ - ಕಠಿಣ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ

ಶನಿವಾರ, 3 ಡಿಸೆಂಬರ್ 2022 (20:58 IST)
ಅಗತ್ಯ ಸೇವೆಗಳ ಹೆಸರಿನಲ್ಲಿ ಮಾದಕ ದಂಧೆಗೆ ಸಾಥ್, ಇ-ಟ್ಯಾಕ್ಸಿ ಚಾಲಕರಿಂದ ಲೈಂಗಿಕ ಕಿರುಕುಳದಂತಹ ಪ್ರಕರಣಗಳಿಂದ ಕೊನೆಗೂ ಬೆಂಗಳೂರು ಪೊಲೀಸರು ಎಚ್ಚೆತ್ತಿದ್ದಾರೆ‌. ನಗರದ ಎಲ್ಲಾ ಆನ್‌ಲೈನ್ ಡಿಲವರಿ, ಟ್ಯಾಕ್ಸಿ ಸೇವಾ ಕಂಪನಿಗಳ ಜೊತೆ ಸಭೆ ನಡೆಸಿ‌ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
 
ಆ್ಯಪ್ ಆಧಾರಿತ ಸೇವೆಗಳ ಡಿಲವರಿ ಬಾಯ್ಸ್, ಚಾಲಕರ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ಪೊಲೀಸರು ಕಠಿಣ ಸೂಚನೆಗಳನ್ನ ನೀಡಿದ್ದಾರೆ. ಲೈಂಗಿಕ ಕಿರುಕುಳ, ರಾತ್ರಿ ಸಂದರ್ಭದಲ್ಲಿ ದರೋಡೆ , ಫುಡ್ ಡಿಲವರಿ ಸೋಗಿನಲ್ಲಿ ಮಾದಕ ಪದಾರ್ಥಗಳ ಪೂರೈಕೆ ಸೇರಿದಂತೆ ಇತ್ತೀಚಿನ ಕೆಲ ಘಟನೆಗಳ ಬಳಿಕ ಎಚ್ಚೆತ್ತ ನಗರ ಪೊಲೀಸರ ಸುಮಾರು ಇಪ್ಪತ್ತಕ್ಕೂ ಅಧಿಕ ಅಗತ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನ ನೀಡಲಾಗಿದೆ.
 
ಅಪರಾಧ ಹಿನ್ನಲೆಯುಳ್ಳವರು ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲೇ ಕೆಲಸ‌ಕ್ಕೆ ಸೇರುವವರ ಹಿನ್ನಲೆ‌ ಪರಿಶೀಲನೆ ನಡೆಸುವುದು ಕಂಪನಿಗಳ ಜವಾಬ್ದಾರಿಯಾಗಿದ್ದು ಅವರ ವಿಳಾಸ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಸಿಬ್ಬಂದಿ ನೇಮಕವಾದ ನಂತರ ತಿಂಗಳಿಗೊಮ್ಮೆ ಅವರ ಹಿನ್ನಲೆ‌ ಪರಿಶೀಲನೆ‌ ಮಾಡುವುದು ಕಡ್ಡಾಯವಾಗಿದ್ದು ನೇಮಕವಾದವರ ಸಂಪೂರ್ಣ ಮಾಹಿತಿ ಆ್ಯಪ್ ನಲ್ಲಿ ನಮೂದನೆ ಕಡ್ಡಾಯವಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಆ್ಯಪ್ ಆಧಾರಿತ ಕಂಪನಿಗಳ ಚಾಲಕರು, ಡಿಲವರಿ ಬಾಯ್ಸ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಂಪನಿಗೆ ಸಂಬಂಧಪಟ್ಟವರೆ ನೇರ ಹೊಣೆ ಎಂದು ಎಚ್ಚರಿಕೆ ಮೀಡಲಾಗಿದೆ.
 
ಇದಷ್ಟೇ ಅಲ್ಲದೇ ಇನ್ನೂ ಅನೇಕ‌ ಸಂದರ್ಭಗಳಲ್ಲಿ ಟ್ಯಾಕ್ಸಿ ಚಾಲಕರು, ಡಿಲವರಿ ಸಿಬ್ಬಂದಿಗಳೂ ಸಹ ಗ್ರಾಹಕರಿಂದ ತೊಂದರೆಗೊಳಗಾದ ಪ್ರಕರಣಗಳು ಕಣ್ಮುಂದೆ ಇರೋದ್ರಿಂದ ಅಂಥಹ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಹ‌ವಿವರಿಸಲಾಗಿದೆ. ಒಟ್ನಲ್ಲಿ ಹೊಸ ತಲೆನೋವಾಗಿರುವ ಕೆಲ ಇ- ಟ್ಯಾಕ್ಸಿ ಚಾಲಕರು, ಡಿಲವರಿ ಬಾಯ್ಸ್ ಸೋಗಿನ ಅಪರಾಧಗಳಿಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆ ನೀಡಿರೋದ್ರಿಂದ ಇನ್ನಾದರೂ ಇಂಥಹ ಪ್ರಕರಣಗಳಿಗೆ ಬ್ರೇಕ್ ಬೀಳುತ್ತಾ ನೋಡಬೇಕಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ