ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ದುರ್ಬೀನು ಬೇಡ, ಎಲ್ಲಾ ಹಂಗೇ ಕಾಣ್ಸುತ್ತೆ: ಸಿಟಿ ರವಿ

Krishnaveni K

ಶುಕ್ರವಾರ, 19 ಜುಲೈ 2024 (12:27 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಪಾರದರ್ಶಕ ಭ್ರಷ್ಟ ಆಡಳಿತವನ್ನು ಜಾರಿ ಮಾಡಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಾರದರ್ಶಕ ಪ್ರಾಮಾಣಿಕ ಆಡಳಿತ ಅಲ್ಲ; ಪಾರದರ್ಶಕ ಭ್ರಷ್ಟ ಆಡಳಿತ ಇದು. ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ. ಆದರೆ, ಆಡಳಿತದಲ್ಲಿ ಪೂರ್ಣ ಇರುವುದು ಭ್ರಷ್ಟಾಚಾರ ಮಾತ್ರ ಎಂದು ವ್ಯಂಗ್ಯವಾಡಿದರು.

ಇವತ್ತು ಬಿಜೆಪಿ ಮತ್ತು ಜೆಡಿಎಸ್ ವಿಧಾನಪರಿಷತ್ ಸದಸ್ಯರು ಗಾಂಧಿ ಪ್ರತಿಮೆಯ ಮುಂದೆ ಈ ಭ್ರಷ್ಟ ಕಾಂಗ್ರೆಸ್ ಸರಕಾರದ ರೇಟ್ ಕಾರ್ಡ್ ಪ್ರದರ್ಶನ ಮಾಡಿದ್ದೇವೆ ಎಂದು ತಿಳಿಸಿದರು. ನೀವು ಯಾರು ಬೇಕಿದ್ದರೂ ಇದನ್ನು ಪರಿಶೀಲಿಸಬಹುದು; ಇದು ಶೇ 100ರಷ್ಟು ಪಕ್ಕಾ ಇರುವ ಕಾಂಗ್ರೆಸ್ ರೇಟ್ ಕಾರ್ಡ್ ಎಂದು ಹೇಳಿದರು.

ಜಾತಿ ಬಲ ಇದ್ದರೆ ನೀವು ಶೇ 10ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಇಲ್ಲದೇ ಇದ್ದರೆ ಇನ್ನೂ ಶೇ 10ರಷ್ಟು ಜಾಸ್ತಿ ಕೊಡಬೇಕಾಗಿ ಬರಬಹುದು ಎಂದು ವಿಶ್ಲೇಷಿಸಿದರು. ಆದರೆ, ಈ ರೇಟ್ ಕಾರ್ಡ್ ಫಿಕ್ಸ್ ಮಾಡಿರುವುದು ಪಕ್ಕಾ. ರೇಟ್ ಕಾರ್ಡ್ ಹೀಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ರೇಟ್ ಕಾರ್ಡ್ ಅನುಗುಣವಾಗಿ ಎಫ್‍ಎಆರ್ (ಫ್ಲೋರ್ ಏರಿಯ ರೇಷಿಯೋ) ಒಂದು ಚದರಡಿಗೆ 100 ರೂ, ಸಿಎಲ್‍ಯು (ಚೇಂಜ್ ಆಫ್ ಲ್ಯಾಂಡ್ ಯೂಸ್- ಭೂ ಪರಿವರ್ತನೆಗೆ) ಒಂದು ಎಕರೆಗೆ 27 ಲಕ್ಷ ಫಿಕ್ಸ್ ಆಗಿದೆ. ಗೃಹ ಇಲಾಖೆಯಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್‍ಗೆ 50 ಲಕ್ಷದಿಂದ ಒಂದು ಕೋಟಿ ಇದ್ದು; ಅದು ಜಾಗದ ಮೇಲೆ ಕಿಮ್ಮತ್ತು ಹೆಚ್ಚು ಕಡಿಮೆ ಆಗುತ್ತದೆ ಎಂದು ತಿಳಿಸಿದರು. ಕನಿಷ್ಠ 50 ಲಕ್ಷದಿಂದ ಗರಿಷ್ಠ ಒಂದು ಕೋಟಿಗೂ ಹೆಚ್ಚು ಎಂದು ವಿವರಿಸಿದರು.

ಎಸಿಪಿ ಹುದ್ದೆಗೆ 1.5 ಕೋಟಿಯಿಂದ 2 ಕೋಟಿವರೆಗೆ (ಜಾಗದ ಕಿಮ್ಮತ್ತಿನ ಮೇಲೆ), ಎಂಜಿನಿಯರ್‍ಗಳಿಗೆ ಎಇ- 20ರಿಂದ 25 ಲಕ್ಷ, ಎಇಇ- 25ರಿಂದ 50 ಲಕ್ಷ, ಎಕ್ಸಿಕ್ಯೂಟಿವ್ ಎಂಜಿನಿಯರ್- 50 ಲಕ್ಷದಿಂದ 75 ಲಕ್ಷ, ಸಿಇ- ಒಂದು ಕೋಟಿಯಿಂದ 5 ಕೋಟಿವರೆಗೆ ನಿಗದಿ ಮಾಡಿದ್ದಾರೆ ಎಂದರು.
 
ಸಬ್ ರಿಜಿಸ್ಟ್ರಾರ್ ಮತ್ತು RTO ಹೋಲ್‍ಸೇಲ್ ಹರಾಜು

ಕಂದಾಯ ಇಲಾಖೆಯಡಿ ತಹಸೀಲ್ದಾರ್- 50 ಲಕ್ಷದಿಂದ ಒಂದು ಕೋಟಿ ನಿಗದಿಯಾಗಿದೆ. ಆದರೆ, ಈಗ ಅದು ಪ್ರಯತ್ನಿಸಿದರೂ ಆಗುತ್ತಿಲ್ಲ; ಅದು ಮಾರಾಟವಾಗಿದೆ. ಮತ್ತೆ ಮುಂದಿನ ವರ್ಷದ ವರೆಗೂ ಕಾಯಬೇಕು ಎಂದು ತಿಳಿಸಿದರು. ಎಸಿ ಹುದ್ದೆ- 5 ಕೋಟಿಯಿಂದ 7 ಕೋಟಿ (ಬೆಂಗಳೂರು), ಎಕ್ಸೈಸ್ ಇಲಾಖೆ- ಇನ್‍ಸ್ಪೆಕ್ಟರ್ 50 ಲಕ್ಷ, ಡಿಸಿ 1 ಕೋಟಿಯಿಂದ 1.5 ಕೋಟಿ, ಸಬ್ ರಿಜಿಸ್ಟ್ರಾರ್ ಮತ್ತು ಆರ್‍ಟಿಒ- ಅದನ್ನು ಹರಾಜು ಹಾಕುತ್ತಾರೆ; ಅದನ್ನು ಹೋಲ್‍ಸೇಲ್ ಆಕ್ಷನ್ ಮಾಡುತ್ತಾರೆ. ಅದು ರಿಟೇಲ್ ಸೇಲ್ ಇಲ್ಲ. ಹೋಲ್‍ಸೇಲ್ ಆಕ್ಷನ್ ಪಡೆದವರು ಮರುಹಂಚಿಕೆ ಮಾಡುತ್ತಾರೆ ಎಂದು ಸಿ.ಟಿ.ರವಿ ಅವರು ತಿಳಿಸಿದರು.
 
ಕಾಂಗ್ರೆಸ್ಸಿನ ಭ್ರಷ್ಟಾಚಾರ ಬರಿಗಣ್ಣಿಗೇ ಕಾಣುತ್ತದೆ. ಕನ್ನಡಕದ ಅಗತ್ಯ ಇಲ್ಲ. ಬರಿಗಣ್ಣಿಗೇ ಬಹಳ ಸ್ಪಷ್ಟವಾಗಿ ಅದು ಗೋಚರಿಸುತ್ತದೆ. ಇದು ಕಾಂಗ್ರೆಸ್ಸಿನ ಪ್ರಾಮಾಣಿಕವಲ್ಲದ ಭ್ರಷ್ಟ ಆಡಳಿತದ ಝಲಕ್ ಎಂದು ತಿಳಿಸಿದರು.
 
ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ದುರ್ಬೀನು ಬೇಡ
 
ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರವನ್ನು ಬಯಲಿಗೆ ತರುವ ಮೂಲಕ ನಾವು ಇವರ ಭ್ರಷ್ಟ ಆಡಳಿತವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದೇವೆ. ಇವತ್ತು ರೇಟ್ ಕಾರ್ಡನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ನೀವು ಯಾರು ಬೇಕಾದರೂ ಪರಿಶೀಲನೆ ಮಾಡಿ; ಅಂಗೈ ಹುಣ್ಣಿಗೆ ಕನ್ನಡಿಯ ಅವಶ್ಯಕತೆ ಹೇಗೆ ಇಲ್ಲವೋ, ಹಾಗೇ ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ದುರ್ಬೀನು ಹಾಕುವ ಅವಶ್ಯಕತೆ ಇಲ್ಲ ಎಂದು ಸಿ.ಟಿ.ರವಿ ಅವರು ತಿಳಿಸಿದರು.
 
ಇಷ್ಟಾದರೂ ಕೂಡ, 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ ಎಂಬ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆಯನ್ನು ಮಾನ್ಯ ಮಾಡಬೇಕೇ ಬೇಡವೇ ಎಂಬುದನ್ನು ನಿಮಗೇ ಬಿಟ್ಟಿದ್ದೇನೆ ಎಂದು ಹೇಳಿದರು. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ