ಬೆಂಗಳೂರು: ಪಂಚೆ ಉಟ್ಟುಕೊಂಡಿದ್ದೆ ಎಂಬ ಕಾರಣಕ್ಕೆ ತನ್ನನ್ನು ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ಮಾಲ್ ನೌಕರನ ಬಗ್ಗೆ ರೈತ ಫಕೀರಪ್ಪ ಮಾತುಗಳು ಕೇಳಿದರೆ ಎಂಥವರಿಗೂ ಕಣ್ಣು ತುಂಬಿ ಬರುತ್ತದೆ.
ತನಗೆ ಅವಮಾನ ಮಾಡಿದರೂ ಫಕೀರಪ್ಪ ಮಾತ್ರ ಯಾರ ಮೇಲೂ ಆಕ್ರೋಶ ವ್ಯಕ್ತಪಡಿಸಿಲ್ಲ. ಪುತ್ರ ಮಾಡಿದ ವಿಡಿಯೋದಿಂದಾಗಿ ಫಕೀರಪ್ಪ ಪ್ರಕರಣ ಎಲ್ಲರಿಗೂ ಗೊತ್ತಾಗಿದೆ. ಇದರ ಬಳಿಕ ಕೆಲವು ಸಂಘಟನೆಗಳು ಫಕೀರಪ್ಪನನ್ನು ಅದೇ ಮಾಲ್ ಬಳಿ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಲ್ಲದೆ, ಅವಮಾನ ಮಾಡಿದವರಿಂದಲೇ ಸನ್ಮಾನ ಮಾಡಿಸಿದೆ.
ಆದರೆ ಈ ವೇಳೆ ಮಾತನಾಡಿದ ಫಕೀರಪ್ಪ ತಾವೆಷ್ಟು ಅಮಾಯಕ, ಮುಗ್ದ ಎಂದು ತೋರಿಸಿಕೊಟ್ಟಿದ್ದಾರೆ. ಅಯ್ಯೋ ಪಾಪ ಅವರನ್ನು ಕೆಲಸದಿಂದ ತೆಗೀತಾರಂತ ಹೇಳ್ತಿದ್ದಾರೆ. ತೆಗೀಬೇಡಿ ಅಂತ ಹೇಳ್ರೀ.. ಪಾಪ ಅವರಿಗೂ ಹೆಂಡ್ರು ಮಕ್ಳಿರ್ತಾರೆ ಎಂದಿರುವ ಫಕೀರಪ್ಪ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಾನು ನೋವುಂಡರೂ ಇತರರಿಗೆ ನೋವು ಮಾಡದವರೆಂದರೆ ರೈತರು ಮಾತ್ರ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಜಿಟಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಏಳು ದಿನಗಳ ಕಾಲ ಬೀಗ ಹಾಕಿದ್ದಾರೆ. ಮಾಲ್ ಮಾಲಿಕರು ವೈಯಕ್ತಿಕವಾಗಿ ಫಕೀರಪ್ಪ ಬಳಿ ತೆರಳಿ ಕ್ಷೆ ಯಾಚಿಸುವುದಾಗಿ ಹೇಳಿದ್ದಾರೆ.