ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಮಸೂದೆ ಪಾಸ್ ಮಾಡಿ ಬೀಗಿದ ರಾಜ್ಯ ಸರ್ಕಾರದ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಯಾಕೆಂದರೆ ಇದರ ಇನ್ನೊಂದು ಬಾಧಕದ ಬಗ್ಗೆ ಸರ್ಕಾರ ಚಿಂತನೆ ಮಾಡಿಯೇ ಇಲ್ಲ.
ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುತ್ತಿದ್ದಂತೇ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗಿತ್ತು. ಕೆಲವೊಂದು ಉದ್ಯಮಗಳಿಗೆ ಆಯಾ ವಿಭಾಗದಲ್ಲಿ ಕೌಶಲ್ಯತೆ ಬೇಕು. ಇದು ಒಂದೆರಡು ದಿನಗಳಲ್ಲಿ ಕಲಿಯುವಂತದ್ದಲ್ಲ. ಈ ಕೌಶಲ್ಯತೆ ಅರಿತಿರುವ ಸ್ಥಳೀಯ ನೌಕರರು ಸಂಸ್ಥೆಗಳಿಗೆ ಸಿಗದೇ ಹೋದಾಗ ಏನು ಮಾಡಬೇಕು ಎಂದು ಉದ್ಯಮಿಗಳು ಪ್ರಶ್ನಿಸಿದ್ದರು.
ಕನ್ನಡಿಗರಿಗೆ ಮೀಸಲಾತಿ ಎನ್ನುವುದು ಕನ್ನಡಿಗರಲ್ಲಿ ಖುಷಿ ತಂದರೂ ಇದರ ಹಿಂದಿನ ಕೆಲವೊಂದು ಅಂಶಗಳು ಉದ್ಯಮಿಗಳಿಗೆ ನುಂಗಲಾರದ ತುತ್ತಾಗಿದೆ. ಸ್ಥಳೀಯ ರಾಜ್ಯ ಸರ್ಕಾರ ಕಠಿಣ ನೀತಿ ರೂಪಿಸಿದಾಗ ದೈತ್ಯ ಉದ್ಯಮಿಗಳು ವಲಸೆ ಹೋಗುವಭೀತಿಯಿದೆ. ಇದರಿಂದ ಆಯಾ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳಬಹುದು.
ಹೀಗಾಗಿ ಉದ್ಯಮಿಗಳ ಅಭಿಪ್ರಾಯಕ್ಕೆ ಯಾವುದೇ ಸರ್ಕಾರವಾದರೂ ಬೆಲೆ ಕೊಡಲೇಬೇಕಾಗುತ್ತದೆ. ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೇ ಸಿಎಂ ತಮ್ಮ ಟ್ವೀಟ್ ನ್ನೇ ಡಿಲೀಟ್ ಮಾಡಿದರು. ಇತ್ತ ಸಚಿವ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಉದ್ಯಮಿಗಳ ಹಿತ ಕಾಯಲೂ ಸರ್ಕಾರ ಬದ್ಧವಾಗಿದೆ ಎಂದರು. ಸ್ಥಳೀಯರಿಗೆ ಉದ್ಯೋಗ ನೀಡವುದು ಮತ್ತು ಇಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸುವುದು ಎರಡನ್ನೂ ಗಮನದಲ್ಲಿಟ್ಟುಕೊಂಡು ಉದ್ಯಮಿಗಳ ಜೊತೆ ಸರ್ಕಾರ ಸಮಾಲೋಚನೆ ನಡೆಸಲು ಮುಂದಾಗಿದೆ.