ಬೆಂಗಳೂರು: ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಹತಾಶವಾದ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುವ ರೀತಿ ಇದೆ. ಖರ್ಗೆ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಯೋಗ್ಯ ಚಿಕಿತ್ಸೆ ಕೊಡಿಸಿ. ರಾಜಕೀಯ ನಿವೃತ್ತಿ ಕೊಡಿಸಿ ಎಂದು ಮಾಜಿ ಸಚಿವ ಸಿ ಟಿ ರವಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ಅವರು ಆರು ದಶಕಗಳ ಕಾಲ ರಾಜಕಾರಣದಲ್ಲಿ ಹಲವಾರು ಹುದ್ದೆಗಳನ್ನು ಅನುಭವಿಸಿ ಇಂತಹ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಹಿರಿತನದ ಹಾಗೂ ಮುತ್ಸದ್ಧಿತನದ ಹೇಳಿಕೆಗಳಾಗಿ ಕಾಣುತ್ತಿಲ್ಲ. ಇದೊಂದು ದ್ವೇಷದ ಹೇಳಿಕೆ ಎಂದರು.
ಗುಜರಾತ್ ಜನ ಅನಕ್ಷರಸ್ಥರಾಗಿರುವುದರಿಂದ ಬಿಜೆಪಿ ಗೆಲ್ಲಿಸಿದರು ಎಂದು ಖರ್ಗೆ ಅವರು ಹೇಳಿದರು. ಹೀಗೆ ಹೇಳಿ ಗುಜರಾತ್ ಜನರನ್ನು ಅವಮಾನಿಸಿದರು. ಕರ್ನಾಟಕದಲ್ಲಿ ನಿರಂತರವಾಗಿ ಲೋಕಸಭೆಗೆ ಬಿಜೆಪಿಯನ್ನು ಜನ ಬೆಂಬಲಿಸುತ್ತಿದ್ದಾರೆ, ಹಾಗಾದರೆ ಕರ್ನಾಟಕದ ಜನರೂ ಅನಕ್ಷರಸ್ಥರೇ ಎಂದು ಪ್ರಶ್ನಿಸಿದರು.
ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಅನ್ನು ವಿಷಸರ್ಪಕ್ಕೆ ಹೋಲಿಸಿದ್ದೀರಿ. ಮುಂದೆ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿದ್ದೀರಿ.
ಈ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನೀವು ವರ್ತಿಸಿದ್ದೀರಿ. ಮಹಾತ್ಮ ಗಾಂಧಿ ಅವರ ಅನುಯಾಯಿ ಆದ ನೀವು ಇಂತಹ ಹೇಳಿಕೆ ನೀಡಬಾರದು. ಗಾಂಧಿ ಅವರು ಇದನ್ನೇ ಬೋಧಿಸಿದ್ದೆ. ಅಹಿಂಸಾ ತತ್ವ ಅಂದರೆ ಇದೇನಾ. ಇವತ್ತಿನ ಗಾಂಧಿಗಳು ಇಂತಹ ಹೇಳಿಕೆ ನೀಡಿ ಎಂದು ಹೇಳಿಕೊಡುತ್ತಿದ್ದರಾ ಎಂದರು.
ಕರ್ನಾಟಕ ಸರ್ಕಾರವು ದ್ವೇಷ ಭಾಷಣ ನಿಷೇಧ ಮಸೂದೆ ತಂದಿದೆ. ಈಗ ಖರ್ಗೆ ಅವರ ಭಾಷಣವೂ ಇದೇ ಮಸೂದೆ ವ್ಯಾಪ್ತಿಗೆ ಬರುವುದಿಲ್ಲವೇ. ಮುಖ್ಯಮಂತ್ರಿಗಳು ಹಾಗೂ ಮರಿ ಖರ್ಗೆ ಯಾಕೆ ಮಾತನಾಡುತ್ತಿಲ್ಲ. ಪ್ರಿಯಾಂಕ್ ಅವರೂ ಸಮರ್ಥನೆ ಮಾಡುತ್ತಾರೆ ಅಂದರೆ ಅನುವಂಶೀಯವಾಗಿ ಮಾನಸಿಕ ಅಸ್ವಸ್ಥತೆ ಇದೆ ಎಂದಾಯಿತು ಎಂದರು.
ಖರ್ಗೆ ಅವರ ಇಂತಹ ಹೇಳಿಕೆಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಒಂದು ವೇಳೆ ಕಾಂಗ್ರೆಸ್ ಗೆ ಸಂಬಂಧ ಇದೆ ಅನ್ನುವುದಾದರೆ ಕಾಂಗ್ರೆಸ್ ಅನ್ನು ಚುನಾವಣಾ ವ್ಯಾಪ್ತಿಯಿಂಧ ನಿಷೇಧ
ಮಾಡಲು ಕ್ರಮ ಕೈಗೊಳ್ಳಬೇಕು. ಕಾಂಗೆಸ್ಸಿಗರು ಸಂಬಂಧ ಇಲ್ಲ ಅಂತಾದರೆ ಸ್ಪಷ್ಟನೆ ಕೊಡಬೇಕು. ಆಯೋಗ ಗಂಭೀರ ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್‍ಗೆ ವೈಚಾರಿಕಾ ವಿರೋಧ ಇರಬಹುದು. ಆದರೆ ನಾವೂ ಎಂದೂ ಕಾಂಗ್ರೆಸ್ಸಿಗರನ್ನು ಕೊಲ್ಲಿ ಅಂತ ಹೇಳಿಲ್ಲ. ಚುನಾವಣೆಯಲ್ಲಿ ಸೋಲಿಸಿ ಅಂತ ಕರೆ ನೀಡುತ್ತೇವೆ. ಭ್ರಷ್ಟಾಚಾರಿಗಳಾದ ಕಾಂಗ್ರೆಸ್‍ನವರು ದೇಶವಿಭಜನೆಗೆ ಕಾರಣರಾದವರು. ಅಂದಿನಿಂದ ಕುಟುಂಬ ರಾಜಕಾರಣ ಮಾಡ್ತ ಬಂದವರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಸೋಲಿಸಿದವರು. ತುರ್ತು ಪರಿಸ್ಥಿತಿ ಹೇರಿದ ಸರ್ವಾಧಿಕಾರಿಗಳು ಎಂದು ನುಡಿದರು. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಇರೋದರಿಂದ ಕಾಂಗ್ರೆಸ್ ಇರೋದು. ಹಾಗೂ ರಾಜಕಾರಣ ಮಾಡಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್‍ಗೆ ನಿರಂತರ ಸೋಲಿನಿಂದ ಹತಾಶೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಠೇವಣಿ ಸಹ ಬರಲ್ಲ. ಪ್ರಚೋದಿಸಿದರೂ ಮುಸ್ಲಿಮರು ಹಾಗೂ ಹಿಂದೂಗಳು ಮತ ಹಾಕಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿಯಲಿ ಅಂತ ನಾವು ಆಗ್ರಹ ಮಾಡುತ್ತಿಲ್ಲ. ಅದು ಅವರ ಪಕ್ಷದ ಒಪ್ಪಂದ. 2028 ರ ವರೆಗೆ ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ನಂತರ ಕಾಂಗ್ರೆಸ್ ಸೋಲುತ್ತೆ. ಸೋಲು ಅವರಿಗೆ ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿನ ಸರ್ಕಾರದ ಕೆಟ್ಟ ಆಡಳಿತದಿಂದ ಸೋಲು ಖಚಿತವಾಗಿದೆ. ಒಳ್ಳೆಯ ಆಡಳಿತ ನೀಡಿದ್ದರೆ ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಆದರೆ ಸಾರ್ವತ್ರಿಕ ಚುನಾವಣೆ ಸೋಲುತ್ತಾರೆ ಎಂದು ಮತ್ತೊಂದು ಪ್ರಶ್ನೆಗೆ ತಿಳಿಸಿದರು.