ಬೆಂಗಳೂರು : ವೈದ್ಯೆಯೊಬ್ಬರಿಗೆ ಕರೆ ಮಾಡಿದ್ದ ವಂಚಕ, ತಾನು ಸೈನಿಕನಾಗಿದ್ದು ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದೇನೆ ಎಂದು ಬೂಸಿ ಬಿಟ್ಟಿದ್ದ. ಶಾಲೆ ಮಕ್ಕಳ ಓದಿಗಾಗಿ ಹಣಸಹಾಯ ಮಾಡುವಂತೆ ಬೇಡಿಕೊಂಡಿದ್ದ. ಜೊತೆಗೆ ಒಂದು ಲಿಂಕ್‌ನ್ನು ಅವರ ಮೊಬೈಲ್ ಗೆ ಕಳುಹಿಸಿದ್ದ. ಆ ಲಿಂಕ್ ಓಪನ್ ಮಾಡುತ್ತಿದ್ದಂತೆಯೇ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಆತಂಕಗೊಂಡ ವೈದ್ಯೆ ವಾಪಸ್ ಕರೆ ಮಾಡಿದಾಗ ಹಣ ಕಡಿತಗೊಂಡಿಲ್ಲ ಎಂದು ವಾದಿಸಿ, ಮತ್ತೊಂದು ಲಿಂಕ್ ಕಳಿಸಿದ್ದ. ಅದನ್ನು ಪತಿ ಮತ್ತು ಮಗಳ ಮೊಬೈಲ್ ನಿಂದ ಓಪನ್ ಮಾಡಿದಾಗ ಅವರ ಖಾತೆಯಿಂದಲೂ ಹಣ ಕಡಿತವಾಗಿತ್ತು. ಆಗ ವೈದ್ಯೆಗೆ ತಾವು ಕುಟುಂಬಸಮೇತ ವಂಚನೆಗೊಳಗಾಗಿರುವುದು ಅರಿವಾಗಿತ್ತು.
ಸೈನಿಕರ ಹೆಸರಿನಲ್ಲಿ ಕರೆ ಮಾಡಿದರೆ ಜನರು ನಂಬುತ್ತಾರೆ ಎಂಬ ದುರಾಲೋಚನೆಯಿಂದ ಸೈಬರ್ ವಂಚಕರು ಯೋಧರ ಹೆಸರಿನಲ್ಲಿ ಮೋಸ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ವಂಚಕನೊಬ್ಬ ಸೈನಿಕನ ಸೋಗಿನಲ್ಲಿ ಕರೆ ಮಾಡಿ ವೈದ್ಯೆಯೊಬ್ಬರ ಬ್ಯಾಂಕ್ ಖಾತೆಯಿಂದ 81 ಸಾವಿರ ರೂ. ಹಣ ಲಪಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ಒಟ್ಟಾರೆ 81 ಸಾವಿರ ಹಣವನ್ನು ವೈದ್ಯಯ ಕುಟುಂಬದವರು ಕಳೆದುಕೊಂಡಿದ್ದು, ವಂಚಕನ ವಿರುದ್ದ ಮಹಾಲಕ್ಷ್ಮೀಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.