ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ಇದರಲ್ಲಿ ದಕ್ಷಿಣ ಕನ್ನಡವೂ ಸೇರಿದೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ನಿಂದ ಪದ್ಮನಾಭ ಪೂಜಾರಿ ಮತ್ತು ಬಿಜೆಪಿಯಿಂದ ಬ್ರಿಜೇಶ್ ಚೌಟ ನಡುವೆ ತೀವ್ರ ಪೈಪೋಟಿಯಿದೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿ ಬ್ರಿಜೇಶ್ ಚೌಟ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಜನ ಸರತಿ ಸಾಲಿನಲ್ಲಿ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಬೆಳಗ್ಗಿನಿಂದ ಇದುವರೆಗೆ ಶೇ. 9.21 ರಷ್ಟು ಮತದಾನ ನಡೆದಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೇ ಪ್ರಥಮವಾಗಿದೆ.
ಇದುವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14.33 ಶೇಕಡಾ ಮತದಾನ ನಡೆದಿದೆ. ಚಾಮರಾಜನಗರ ಮತ್ತು ಮಂಡ್ಯದಲ್ಲಿ ಬೆಳಗ್ಗಿನಿಂದ ಇದುವರೆಗೆ 7.70 ಶೇಕಡಾ ಮತದಾನ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವ ಸಾಧ‍್ಯತೆಯಿದೆ.