ಬೆಂಗಳೂರು: ಏಪ್ರಿಲ್ 26 ಅಂದರೆ ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೆ ಯಾವ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು, ಯಾವುದನ್ನು ತೆಗೆದುಕೊಂಡು ಹೋಗಬಾರದು ಎಂಬ ಮಾಹಿತಿಗೆ ಇಲ್ಲಿ ಓದಿ.
ಮತದಾನ ಮಾಡಲು ಸರ್ಕಾರದ ಗುರುತಿನ ಚೀಟಿ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಇಲ್ಲದೇ ಹೋದರೆ ಕೇಂದ್ರ ಸರ್ಕಾರದಿಂದ ಅನುಮೋದಿತವಾಗಿರುವ ಐಡಿ ಪ್ರೂಫ್ ಯಾವುದೇ ಇದ್ದರೂ ನಡೆಯುತ್ತದೆ. ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ ದಾಖಲೆಗಳನ್ನು ಕೊಂಡೊಯ್ದು ಮತದಾನ ಮಾಢಬಹುದಾಗಿದೆ. ಅಥವಾ ಕೇಂದ್ರ ಸರ್ಕಾರೀ ನೌಕರರು ತಮ್ಮ ಕಚೇರಿಯ ಐಡಿ ಕಾರ್ಡ್ ತೋರಿಸಿಯೂ ಮತದಾನ ಮಾಡಬಹುದಾಗಿದೆ.
ಇನ್ನು ಮತದಾನ ಕೇಂದ್ರಕ್ಕೆ ಹೋಗುವಾಗ ವೋಟರ್ ಸ್ಲಿಪ್ ಇರುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮಗೆ ಮೊದಲೇ ವೋಟರ್ ಸ್ಲಿಪ್ ಸಿಗದೇ ಇದ್ದಲ್ಲಿ, ಮತದಾನ ಕೇಂದ್ರದಿಂದಲೂ ಕೇಳಿ ಪಡೆಯಬಹುದಾಗಿದೆ.
ಮತದಾನ ಮಾಡಲು ಹೋಗುವಾಗ ಕೆಲವೊಂದು ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್ ಫೋನ್, ಲ್ಯಾಪ್ ಟಾಪ್, ಇತರೆ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಮತದಾನ ಕೇಂದ್ರದ ಒಳಗೆ ಒಯ್ಯುವಂತಿಲ್ಲ. ಅನಿವಾರ್ಯವಾಗಿ ಮೊಬೈಲ್ ತೆಗೆದುಕೊಂಡು ಹೋದರೂ ಹೊರಗೆ ಅಧಿಕಾರಿಗಳ ಬಳಿ ಇಟ್ಟು ಮತ ಹಾಕಲು ತೆರೆಳಬೇಕಾಗುತ್ತದೆ. ಅದಲ್ಲದೆ, ಮತದಾನ ಕೇಂದ್ರದ ಆವರಣದಲ್ಲಿ ಜೋರಾಗಿ ಹಾಡು, ಹರಟೆ ಮಾಡುವುದಕ್ಕೆ ಅವಕಾಶವಿಲ್ಲ. ಆದಷ್ಟು ಗದ್ದಲವಿಲ್ಲದೇ, ಯಾರಿಗೂ ತೊಂದರೆಯಾಗದಂತೆ ಮತದಾನ ಮಾಡಿ ಬರಬೇಕು.