ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ರನ್ನು ಕಾಪಾಡುವ ಹೊಣೆ ಈಗ ಘಟಾನುಘಟಿಗಳ ಪರ ವಾದಿಸಿ ಜಾಮೀನು ಕೊಡಿಸಿದ್ದ ಖ್ಯಾತ ವಕೀಲ ಸಿವಿ ನಾಗೇಶ್ ಅವರ ಹೆಗಲಿಗೇರಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷ್ಯಗಳಿದ್ದು, ಅವರು ಇನ್ನು ಹೊರಬರುವುದು ಅನುಮಾನ ಎಂಬ ಸ್ಥಿತಿಯಲ್ಲಿರುವಾಗ ಪತ್ನಿ ವಿಜಯಲಕ್ಷ್ಮಿ ಶತಾಯಗತಾಯ ಅವರನ್ನು ಜಾಮೀನಿನ ಮೇಲೆ ಹೊರತರಲು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಪರವಾಗಿ ವಾದ ಮಂಡಿಸಲು ಈಗ ಹಿರಿಯ ವಕೀಲ ಸಿವಿ ನಾಗೇಶ್ ಅವರನ್ನು ನೇಮಿಸಿದ್ದಾರೆ.
ಸಿವಿ ನಾಗೇಶ್ ಈ ಹಿಂದೆ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ರನ್ನು ಅಂದು ಜಾಮೀನಿನ ಮೇಲೆ ಬಿಡುಗಡೆಯಾಗುವಂತೆ ಮಾಡಿದ್ದರು. ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲೂ ಅವರೇ ಯಡಿಯೂರಪ್ಪ ಪರ ವಾದ ಮಂಡಿಸಿದ್ದರು. ಈ ಹಿಂದೆ ಶಾಸಕ ಮುನಿರತ್ನ ಪರವಾಗಿಯೂ ಅವರೇ ವಾದ ಮಂಡಿಸಿದ್ದರು. ಇತ್ತೀಚೆಗೆ ಶಾಸಕ ಎಚ್ ಡಿ ರೇವಣ್ಣ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾದಾಗ ಅವರನ್ನೂ ಬಿಡಿಸಿಕೊಂಡು ಬಂದಿದ್ದರು. ಹೀಗೆ ರಾಜ್ಯದ ಘಟಾನುಘಟಿ ರಾಜಕೀಯ ನಾಯಕರು, ಗಣ್ಯರೆನಿಸಿಕೊಂಡವರ ಕೇಸ್ ಗಳಲ್ಲಿ ವಾದ ಮಂಡಿಸಿದ ಹೆಗ್ಗಳಿಕೆ ನಾಗೇಶ್ ಅವರದ್ದು.
ಇದೀಗ ದರ್ಶನ್ ಪರವಾಗಿ ವಾದ ಮಂಡಿಸಲು ವಿಜಯಲಕ್ಷ್ಮಿ ಸಿವಿ ನಾಗೇಶ್ ಅವರಿಗೆ ಮನವಿ ಮಾಡಿದ್ದಾರೆ. ಅದರಂತೆ ನಾಗೇಶ್ ಈಗಾಗಲೇ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿರುವ ನಟ ದರ್ಶನ್ ರನ್ನು ಭೇಟಿ ಮಾಡಿ ಬಂದಿದ್ದಾರೆ. ಮುಂದೆ ದರ್ಶನ್ ನ್ಯಾಯಾಂಗ ಬಂಧನಕ್ಕೊಳಗಾಗದ ಬಳಿಕ ಅವರ ಪರವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ದರ್ಶನ್ ಗೆ ಜಾಮೀನು ಪಡೆಯಬೇಕೆಂದರೆ ಹೈಕೋರ್ಟ್ ಮೊರೆ ಹೋಗಬೇಕಾಗಬಹುದು. ಇದಕ್ಕೆ ಮೊದಲು ಸ್ಥಳೀಯ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಬೇಕು. ಇದಾದ ಬಳಿಕ ಸಿವಿ ನಾಗೇಶ್ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.